ವರದಿ: ಗಣೇಶ್ ಹೆಗಡೆ
ಬೆಂಗಳೂರು: ಕೋವಿಡ್‌ನಿಂದ ಎರಡು ವರ್ಷ ಮಕ್ಕಳಿಗೆ ಸೂಕ್ತ ಪಾಠವಿಲ್ಲದೇ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮೇ. 16ರಂದೇ ರಾಜ್ಯದಲ್ಲಿ ಶಾಲೆಗಳ ಅರಂಭಕ್ಕೆ ಸೂಚನೆ ನೀಡಿದ್ದರು. ಬೇಸಿಗೆ ಹಾಗೂ ಕೋವಿಡ್ 4ನೇ ಅಲೆ ನೆಪದಲ್ಲಿ ಶಾಲೆ ಪ್ರಾರಂಭ ದಿನಾಂಕವನ್ನು ಮುಂದೂಡಿಸುವ ಹುನ್ನಾರ ನಡೆದಿದ್ದು, ಯಾವುದೇ ಕಾರಣಕ್ಕೂ ಶಾಲೆಗಳ ಪ್ರಾರಂಭ ದಿನಾಂಕವನ್ನು ಮುಂದೂಡಬಾರದು ಎಂದು ರೂಪ್ಸಾ ಸಂಘಟನೆ ಮನವಿ ಮಾಡಿದೆ.
ಕೋವಿಡ್‌ನಿಂದಾಗಿ ಎರಡು ವರ್ಷದಿಂದ ಆನ್‌ಲೈನ್ ಕಲಿಕೆಗೆ ಅವಕಾಶ ನೀಡಿದ್ದರಿಂದ ಮಕ್ಕಳ ಕಲಿಕೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಎರಡು ಶೈಕ್ಷಣಿಕ ವರ್ಷದಲ್ಲ ಮಕ್ಕಳ ನಿಷ್ಠವಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಮತ್ತು ಶೈಕ್ಷಣಿಕವಾಗಿ ಕಲಿಕೆಯಿಂದ ಹಿಂದುಳಿದು ಅನ್ಯಾಯಕ್ಕೆ ಒಳಗಾಗಿದ್ದಾರೆ. ಇದನ್ನು ಅರಿತ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೇ. 16ರಿಂದ ಶಾಲೆಗಳನ್ನು ಆರಂಭ ಮಾಡಿ ಅಧಿಸೂಚನೆ ಹೊರಡಿಸಿತ್ತು. ಆದರೆ ಕೆಲವು ರಾಜಕಾರಣಿಗಳು ನಾನಾ ಕಾರಣ ನೀಡಿ ಶಾಲೆಗಳ ಅರಂಭ ದಿನಾಂಕವನ್ನು ಮುಂದೂಡುವ ಪ್ರಯತ್ನ ಮಾಡಲು ಸರ್ಕಾರದ ಮೇಲೆ ಪ್ರಭಾವ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳು ಹಾಲಿ ನಿರ್ಧಾರದಿಂದ ಹಿಂದೆ ಸರಿಯದೇ ನಿಗದಿಯಂತೆ ಶಾಲೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರೂಪ್ಸಾ ಮನವಿ ಮಾಡಿದೆ.
PublicNext
09/05/2022 04:10 pm