ಅಥಣಿ: ಕರ್ನಾಟಕದ ಸರ್ಕಾರ 2022-23 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಸ್ವಾಗತಾರ್ಹ. 31 ಶಿಕ್ಷಕರಲ್ಲಿ ವಿಶೇಷವಾಗಿ ಮಹಿಳಾ ಶಿಕ್ಷಕಿಯರಿಗೆ ಅಕ್ಷರದ ಅವ್ವ "ಮಾತೆ ಸಾವಿತ್ರಿ ಬಾಯಿ ಫುಲೆ" ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಘೋಷಣೆ ಮಾಡಿರುವ ಕ್ರಮ ಸ್ತುತ್ಯಾರ್ಹ ಎಂದು ಅಥಣಿ ಮಾಳಿ/ಮಾಲಗಾರ ಸಮಾಜದ ಹಿರಿಯ ಮುಖಂಡ ಸದಾಶಿವ ಕೆ.ಬುಟಾಳಿ ಹೇಳಿದರು.
ಅವರು ಅಥಣಿ ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದರು. ಕೆಲವು ದಿನಗಳ ಹಿಂದೆ ಮಾಳಿ/ಮಾಲಗಾರ ಸಮಾಜದ ನಿಯೋಗದಿಂದ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿತ್ತು. 12ನೇ ಶತಮಾನದ ಶಿವಶರಣೆ, ಮಾಳಿ ಸಮಾಜದ ಮುಕುಟಮಣಿ ನೆಲ್ಲೂರು ನಿಂಬೆಕ್ಕನ ದೇವಸ್ಥಾನ ಅಭಿವೃದ್ಧಿ ಪಡಿಸುವುದು, ಸಮಾಜದ ಬಡ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಮಾಳಿ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಘೋಷಣೆ ಮಾಡಬೇಕು ಹಾಗೂ ಅಕ್ಷರದ ಅವ್ವ "ಮಾತೆ ಸಾವಿತ್ರಿ ಬಾಯಿ ಫುಲೆ" ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಘೋಷಣೆ ಮಾಡಬೇಕು ಎಂಬ ಬೇಡಿಕೆ ಮಂಡಿಸಲಾಗಿತ್ತು.
ಈ ಬೇಡಿಕೆಗೆ ಅನುಗುಣವಾಗಿ ನಾಳೆ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಹಾಗೂ ಸಿಎಂ ಅವರ ಗಮನಕ್ಕೆ ಈ ವಿಷಯ ತಂದ ಸಮಾಜ ಬಾಂಧವರಿಗೂ ವಿಶೇಷವಾಗಿ ಮುಂದಾಳತ್ವ ವಹಿಸಿದ ಮುಗಳಖೋಡದ ಹಿರಿಯ ಸಿ.ಬಿ. ಕುಲಗೋಡ ಅವರಿಗೂ ಕೂಡ ಅಭಿನಂದನೆಗಳು ಎಂದರು.
ಈ ವೇಳೆ ಮಾಳಿ/ಮಾಲಗಾರ ಸಮಾಜದ ಮುಖಂಡರಾದ ಮಹಾಂತೇಶ ಮಾಳಿ, ಮಹಾದೇವ ಚಮಕೇರಿ, ಮಲ್ಲಿಕಾರ್ಜುನ ಬಾಳಿಕಾಯಿ, ಪ್ರಶಾಂತ ತೋಡಕರ, ರವಿ ಬಡಕಂಬಿ, ರಮೇಶ ಮಾಳಿ, ಶಿವಲಿಂಗ ಬೆಳ್ಳಂಕಿ, ಮಲ್ಲಿಕಾರ್ಜುನ ಬುಟಾಳಿ, ರವಿ ಭಾಸಿಂಗಿ, ರವಿ ಬಕಾರಿ, ಕೇದಾರಿ ದಿವಾನಮಳ, ಶಿವಪ್ಪ ಹಲವೇಗಾರ, ಬಸವರಾಜ ಹಳ್ಳದಮಳ ಸೇರಿದಂತೆ ಇತರರು ಉಪಸ್ಥಿತರಿದ್ದರು.
PublicNext
04/09/2022 04:41 pm