ರಾಜ್ಯದಲ್ಲಿ ದಿನೇ ದಿನೇ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರುತ್ತಿದೆ. ಮಠಾಧೀಶರು, ಶಿಕ್ಷಣ ತಜ್ಞರು, ಸಾಹಿತಿಗಳು, ಲೇಖಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಗಂಗಾ ಸ್ವಾಮೀಜಿ ಅವರು ಪ್ರತಿಕ್ರಿಯೆ ನೀಡಿದ್ದು, ಬಸವಣ್ಣನವರ ತತ್ವಗಳು ಪ್ರತಿಯೊಬ್ಬ ವ್ಯಕ್ತಿಗೂ ಬೇಕಾಗಿದೆ. ಅವರ ವಚನಗಳೇ ನಮಗೆ ಆಧಾರ ಆಗಿವೆ. ಆದ್ದರಿಂದ ಅದನ್ನು ತಿರುಚುವ ಪ್ರಯತ್ನ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಾಸ್ತವ ವಿಚಾರಗಳನ್ನು ಪ್ರಕಟ ಮಾಡುವುದು ಒಳ್ಳೆಯದು. ಪಠ್ಯ ಪುಸ್ತಕ ವಿವಾದವನ್ನು ಹೆಚ್ಚಾಗಿ ಬೆಳಸಬಾರದು ಎಂದು ಹೇಳಿದರು.
ಪಠ್ಯ ಪುಸ್ತಕದ ವಿವಾದವ ದಿನ ಕಳೆದಂತೆ ಬೇರೆಯದ್ದೇ ಸ್ವರೂಪ ಪಡೆಯುತ್ತಿದೆ. ಈಗಾಗಲೇ ಬಹಳಷ್ಟು ತಿರುವು ಪಡೆದುಕೊಂಡಿದೆ. ಯಾವುದೇ ಕಾರಣದಿಂದ ಇಂತಹ ವಾತಾವರಣ ಸೃಷ್ಟಿ ಆಗಬಾರದು. ಮಕ್ಕಳಿಗೆ ಏನೇ ವಿಷಯ ಬೋಧನೆ ಮಾಡಿದರೂ ನೈತಿಕ ಶಿಕ್ಷಣದ ಅತ್ಯಂತ ಅಗತ್ಯವಾಗಿ ಬೇಕು ಎಂದು ತಿಳಿಸಿದರು.
ಪಠ್ಯ ಪುಸ್ತಕದಲ್ಲಿ ನೈತಿಕ ಕೊರತೆ ಹೆಚ್ಚು ಕಾಣ್ತಾ ಇದೆ. ಮೂಲ ವಿಚಾರವನ್ನು ತಿದ್ದದೇ ವಾಸ್ತವ ವಿಚಾರದ ಬಗ್ಗೆ ತಿಳಿಸುವ ಕಾರ್ಯ ಮಾಡಬೇಕು. ವಾದ, ವಿವಾದಗಳು ಪೂರ್ಣಗೊಂಡು ಶಾಂತಿ ವಾತವರಣ ನಿರ್ಮಾಣ ಆಗಬೇಕು. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಉಂಟಾಗಬೇಕು ಎಂದು ಹೇಳಿದರು.
ಬಸವಣ್ಣನವರು ಸಮಾಜಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮಾನವ ಬದುಕಿಗೆ ಬೇಕಾದ ತತ್ಚವನ್ನು ಕೊಟ್ಟಿರುವುದು ಮುಖ್ಯ. ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡಿದರೆ ಅದು ಬಸವಣ್ಣನವರಿಗೆ ಕೊಟ್ಟ ಗೌರವ ಆಗುತ್ತದೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
PublicNext
03/06/2022 01:25 pm