ದಾವಣಗೆರೆ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಿನ್ಸಿಪಾಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ತೆರಳಲು ನಮಗೆ ಅವಕಾಶ ನೀಡುವಂತೆ
ಆಗ್ರಹಿಸಿ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
ಉಡುಪಿ ಹಾಗೂ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ಧಾರ್ಮಿಕ ಶಿರವಸ್ತ್ರ ಧರಿಸುವುದಕ್ಕೆ ನಿರ್ಬಂಧ ಪಡಿಸುತ್ತಿರುವುದು ಸರಿಯಲ್ಲ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರ ನಡೆಯು ಕಾನೂನು ವಿರೋಧಿ ಮತ್ತು ಅಸಂವಿಧಾನಿಕವಾಗಿದೆ. ಎಲ್ಲಾ ಧರ್ಮದವರಿಗೂ ಅವರವರ ಧಾರ್ಮಿಕ ವಿಧಿವಿಧಾನದಂತೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಆದ್ದರಿಂದ ಮಹಿಳಾ ಸಬಲೀಕರಣ ಮತ್ತು ಸುರಕ್ಷತೆಗೆ ಬೇಕಾಗುವ ಎಲ್ಲಾ ರೀತಿಯ ಕ್ರಮಗಳನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ನಮಗೆ ಹಿಜಾಬ್ ಧರಿಸಲು ಅವಕಾಶ ಕೊಡಬೇಕು,ಹಿಜಾಬ್ ಬೇಕೇ ಬೇಕು ಎಂದುಘೋಷಣೆ ಕೂಗುತ್ತಾ ಒತ್ತಾಯಿಸಿದರು.
ಮಧ್ಯಾಹ್ನ 1 ಗಂಟೆಗೆ ಹಿಂದೂ ಜಾಗರಣ ವೇದಿಕೆಯವರು ಪ್ರತಿಭಟನೆ ಆರಂಭಿಸಿದರು. ಬಿಸಿಲು ಏರಿದಂತೆ ಹೋರಾಟದ ಕಾವು ಏರತೊಡಗಿತು.ಮಧ್ಯಾಹ್ನ 2.30ಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿತ್ತು. ಮಧ್ಯಾಹ್ನ 2 ಗಂಟೆಯಾಗುತ್ತಿದ್ದಂತೆ ಮುಸ್ಲಿಂ ವಿದ್ಯಾರ್ಥಿನಿಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಜಮಾಯಿಸತೊಡಗಿದರು. ಆಗ ಜಯದೇವ ವೃತ್ತದಲ್ಲಿ ಕೆಲಹೊತ್ತು ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.
PublicNext
07/02/2022 05:05 pm