ಬೆಂಗಳೂರು: ಮೇ 28 ರಂದು ಸಾವರ್ಕರ್ ಜನ್ಮ ದಿನಾಚರಣೆಯ ದಿನವೇ ಸ್ವಾತಂತ್ರ್ಯದ ಅಮೃತಮಹೋತ್ಸವ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಚಾಲನೆ ನೀಡಲಿದೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು.
ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಅಮೃತ ಭಾರತಿಗೆ ಕನ್ನಡದ ಆರತಿ' ಎಂಬ ಘೋಷವಾಕ್ಯದೊಂದಿಗೆ ಮೂರು ಹಂತದಲ್ಲಿ ಮೂರು ತಿಂಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಇದು ಸರ್ಕಾರಿ ಕಾರ್ಯಕ್ರಮವೇ ಆದರೂ ದೇಶಭಕ್ತಿ ಜಾಗೃತಗೊಳಿಸುವ ಅಭಿಯಾನ. ಹೀಗಾಗಿ ಅಚ್ಚುಕಟ್ಟಾಗಿ ಆಯೋಜನೆ ಮಾಡುವಂತೆ ಸುನೀಲ್ ಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮೂವರು ಕೇಂದ್ರ ಸಚಿವರು ಪಾಲ್ಗೊಳ್ಳಲಿದ್ದು, ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿದುರಾಶ್ವತ್ಥದಲ್ಲಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಯಾದಗಿರಿಯ ಸುರಪುರದಲ್ಲಿ ನಾನು ಭಾಗವಹಿಸುತ್ತೇನೆ ಎಂದು ಹೇಳಿದರು.
ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಕ್ರಮ ನಡೆಯುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಜಿಲ್ಲಾಧಿಕಾರಿಗಳ ಖಾತೆಗೆ ತಲಾ 1.5 ಲಕ್ಷ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆಯ ಎಡಿಗಳ ಖಾತೆಗೆ 1.80 ಲಕ್ಷ ರೂ. ಜಮೆ ಮಾಡಲಾಗಿದೆ ಎಂದರು.
ಮೂರನೇ ಹಂತದಲ್ಲಿ ಆ.1 ರಿಂದ 8 ರ ವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶೀರ್ಷಿಕೆಯಲ್ಲಿ ಆರು ಸ್ವಾತಂತ್ರ್ಯ ಅಮೃತ ಮಹೋತ್ಸವದ ರಥಯಾತ್ರೆ ನಡೆಸಲಾಗುತ್ತದೆ. ರಾಜ್ಯದ 31 ಜಿಲ್ಲೆಗಳನ್ನು ಹಾದು ಈ ರಥಯಾತ್ರೆ ಬೆಂಗಳೂರಿಗೆ ತಲುಪಲಿದೆ. ರಥಯಾತ್ರೆ ಸಾಗಬೇಕಾದ ಮಾರ್ಗಗಳ ರೂಟ್ ಮ್ಯಾಪ್ ಅನ್ನು ಕರಾರುವಕ್ಕಾಗಿ ಸಿದ್ಧಪಡಿಸಲಾಗುತ್ತಿದ್ದು, ಜಿಲ್ಲಾವಾರು ಕಾಲೇಜು ವಿದ್ಯಾರ್ಥಿಗಳು, ಯುವಕ ಸಂಘ, ಕಲಾ ತಂಡಗಳನ್ನು ಬಳಸಿಕೊಂಡು ಮೆರವಣಿಗೆ ನಡೆಸಲಾಗುತ್ತದೆ. ವಿವಿಧ ರಂಗಾಯಣದಿಂದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಪಟ್ಟ ನಾಟಕಗಳನ್ನು ಆಯಾ ಜಿಲ್ಲಾವಾರು ರಚನೆ ಮಾಡಲು ಸೂಚನೆ ನೀಡಲಾಗಿದೆ.
ಆಗಸ್ಟ್ 9, 10 ಮತ್ತು 11 ರಂದು ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಬೆಂಗಳೂರಲ್ಲಿ ನಡೆಯಲಿದೆ. ಜಿಲ್ಲೆಗಳಿಂದ ಹೊರಟ ರಥಯಾತ್ರೆ ಆ 9 ರಂದು ಬೆಂಗಳೂರು ತಲುಪಲಿದೆ. ರಾಜಧಾನಿಯಲ್ಲಿ ಭಾರಿ ಮೆರವಣಿಗೆ, ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯುತ್ತದೆ. ಆ.10 ರಂದು ಇಡೀ ರಾಜ್ಯದಲ್ಲಿ ಎಲ್ಲರ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
PublicNext
24/05/2022 04:05 pm