ಕೋಲಾರ : ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಜಿಲ್ಲೆ ಮಾಲೂರಿಗೆ ಭೇಟಿ ನೀಡಿ, ಮಾಲೂರಿನ ದೊಡ್ಡಶಿವಾರ ಕೆರೆಗೆ ಬಾಗಿನ ಅರ್ಪಣೆ ಮಾಡಿದರು.
ಇನ್ನು ಕೆಸಿ ವ್ಯಾಲಿ ಯೋಜನೆಯ ನೀರಿನಿಂದ ಈ ಕೆರೆ ತುಂಬಿದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯಿಂದಾಗಿ ಜಿಲ್ಲೆಯ 126 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.
ಇದೇ ವೇಳೆ ಕೆಸಿ ವ್ಯಾಲಿ ಯೋಜನೆ ಬಗ್ಗೆ ಟೀಕೆ ಮಾಡಿದ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಇವರು ಮಣ್ಣಿನ ಮಕ್ಕಳಂತೆ ಅದ್ಯಾವ್ ಲೆಕ್ಕದಲ್ಲೂ ಎಂದು ಟೀಕೆ ಮಾಡಿದರು. ಈ ಯೋಜನೆಯಿಂದ ಅಂತರ್ಜಲ ಏರಿಕೆ ಆಗಿದೆ. ಪಾತಾಳಕ್ಕೆ ಕುಸಿದಿರುವ ನೀರು 300 ರಿಂದ 5೦೦ ಅಡಿಗಳಿಗೆ ಸಿಗ್ತಾಯಿದೆ. ಇದನ್ನು ಮಣ್ಣಿನ ಮಕ್ಕಳು ಟೀಕಿಸ್ತಾರೆ ಅವರಿಗೆ ತಕ್ಕ ಪಾಠ ಕಲಿಸಿ ಎಂದರು.
ನಾವು ರೈತರ ಮಕ್ಕಳು ಅವ್ರು ಮಣ್ಣಿನ ಮಕ್ಕಳು ಎಂದು ಕಾಲೆಳೆದ ಸಿದ್ದರಾಮಯ್ಯ, ಮುಂದೆ ನಮ್ಮ ಸರ್ಕರ ಬಂದೇ ಬರತ್ತೆ ಆಗ ಬಾಕಿ ಇರುವ ನೀರಾವರಿ ಯೋಜನೆಗಳನ್ನು ಕೊಡ್ತೇವೆ ಎಂದು ಭರವಸೆ ನೀಡಿದರು. ಬಿಜೆಪಿ ಸರ್ಕಾರದಲ್ಲಿ ಹಣ ಇಲ್ಲ, ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇರಲಿಲ್ಲ. ನಮ್ಮ ಸರ್ಕಾರ ಇದ್ದಾಗ ಏಳು ಕೆಜಿ ಅಕ್ಕಿ ಕೊಡ್ತಿತ್ತು. ಈಗ ಅದರಲ್ಲಿ ಎರಡು ಕೆಜಿ ಕಡಿಮೆ ಮಾಡಿದ್ದಾರೆ. ಇನ್ನು ಉಮೇಶ್ ಕತ್ತಿ ಅಕ್ಕಿ ಕಡಿಮೆ ಮಾಡಿದ್ದಾರೆ ಅವರಿಗೆ ಸಕ್ಕರೆ ಕಾಯಿಲೆ ಇರಬೇಕು ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಕೆವೈ ನಂಜೇಗೌಡ ಸೇರಿ ಹಲವರು ಭಾಗಿಯಾಗಿದ್ದರು. ಮುಖ್ಯವಾಗಿ ಕಾರ್ಯಕ್ರಮದಲ್ಲಿ ಕೊರೊನಾ ನಿಯಮಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು ಸಾಮಾನ್ಯವಾಗಿತ್ತು.
PublicNext
01/10/2021 06:04 pm