ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

250 ಅಭ್ಯರ್ಥಿಗಳು ಡೀಲ್?: ಪಿಎಸ್‌ಐ ಹುದ್ದೆಗಾಗಿ ಹಣ ಕೊಟ್ಟವರಿಗೆ ಬಂಧನ ಭೀತಿ

'ಕೃಪೆ- ಕೀರ್ತಿನಾರಾಯಣ ಸಿ. ವಿಜಯವಾಣಿ'

ಬೆಂಗಳೂರು ಸಬ್ ಇನ್​ಸ್ಪೆಕ್ಟರ್ ನೇಮಕಾತಿ ಅಕ್ರಮದ ಇನ್ನಷ್ಟು ಒಳಸುಳಿ ಹೊರಬಿದ್ದಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಈ ಡೀಲ್​ನಲ್ಲಿ 250ಕ್ಕೂ ಅಧಿಕ ಅಭ್ಯರ್ಥಿಗಳು ಭಾಗಿಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾದ ಪರೀಕ್ಷಾ ಕೇಂದ್ರಗಳು ಹಾಗೂ 1 ಮತ್ತು 2ನೇ ಪ್ರಶ್ನೆಪತ್ರಿಕೆಯಲ್ಲಿನ ಅಂಕಗಳ ವ್ಯತ್ಯಾಸದ ಮೇಲೆ ಶಂಕಿತ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಸಿಐಡಿ ತನಿಖೆ ನಡೆಸುತ್ತಿದೆ. ಇದರಿಂದಾಗಿ ಅಡ್ಡದಾರಿಯಲ್ಲಿ ಸಬ್ ಇನ್​ಸ್ಪೆಕ್ಟರ್ ಹುದ್ದೆ ಗಿಟ್ಟಿಸಲು ಹೊಲ-ಗದ್ದೆ ಅಡಮಾನವಿಟ್ಟು ಲಕ್ಷಾಂತರ ರೂ. ಕೊಟ್ಟ ಅಭ್ಯರ್ಥಿಗಳಿಗೀಗ ಬಂಧನದ ಭೀತಿ ಶುರುವಾಗಿದೆ.

ಕಲಬುರಗಿಯ ಜ್ಞಾನಜ್ಯೋತಿ ಆಂಗ್ಲ ಶಾಲೆಯ ಪರೀಕ್ಷಾ ಕೇಂದ್ರದಿಂದ ಶುರುವಾದ ಅಕ್ರಮದ ವ್ಯವಹಾರ ಬೆಂಗಳೂರಿಗೂ ವ್ಯಾಪಿಸಿದೆ. ಈವರೆಗಿನ ತನಿಖೆಯಲ್ಲಿ 250ಕ್ಕೂ ಅಧಿಕ ಅಭ್ಯರ್ಥಿಗಳ ಆಯ್ಕೆ ಅನುಮಾನಾಸ್ಪದವಾಗಿದೆ ಎಂಬುದು ಬಹಿರಂಗವಾಗಿದೆ. ಮೂಲ ಓಎಂಆರ್ ಶೀಟ್ ಮತ್ತು ಅಭ್ಯರ್ಥಿಯ ಬಳಿ ಇರುವ ಓಎಂಆರ್ ಶೀಟ್​ಗಳ ಕಾರ್ಬನ್ ಪ್ರತಿ ಪರಿಶೀಲನಾ ಕಾರ್ಯ ಮುಂದುವರೆದಿದೆ. ಒಟ್ಟು 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಕೆಲವು ಕೇಂದ್ರಗಳ ಮೇಲೆ ಅನುಮಾನ ವ್ಯಕ್ತವಾಗಿದೆ.

ಅಡ್ಡದಾರಿ ಹಿಡಿದು ಕೆಟ್ಟರು!: ಸರ್ಕಾರಿ ನೌಕರಿ ಸಿಗುವ ಆಸೆಗಾಗಿ ಕೆಲವರು ಹೊಲ-ಗದ್ದೆ ಅಡಮಾನವಿಟ್ಟಿದ್ದರೆ, ಮತ್ತೆ ಕೆಲವರು ಸಾಲ ಮಾಡಿ, ಇನ್ನಷ್ಟು ಮಂದಿ ಕುಟುಂಬಸ್ಥರು ಕೂಡಿಟ್ಟ ಹಣ ತಂದುಕೊಟ್ಟಿದ್ದರು. ಆದರೀಗ ಅವರಿಗೆಲ್ಲ ಬಂಧನದ ಭಯ ಆವರಿಸಿದೆ. ಸಿಐಡಿಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ತಪ್ಪಿಸಿಕೊಳ್ಳಲು ನಾನಾ ನಾಟಕ: ನೇಮಕಾತಿ ಪಟ್ಟಿಯಲ್ಲಿದ್ದ 545 ಪಿಎಸ್​ಐ ಅಭ್ಯರ್ಥಿಗಳಿಗೆ ಓಎಂಆರ್ ಶೀಟ್, ಕಾರ್ಬನ್ ಕಾಪಿ ಸಮೇತ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಸೂಚಿಸಿತ್ತು. ಈ ಪೈಕಿ 400 ಅಭ್ಯರ್ಥಿಗಳು ವಿಚಾರಣೆಗೆ ಬಂದಿದ್ದು, ಉಳಿದ 100ಕ್ಕೂ ಅಧಿಕ ಅಭ್ಯರ್ಥಿಗಳು ವಿಚಾರಣೆಗೆ ಗೈರಾಗಿದ್ದಾರೆ. ಓಎಂಆರ್ ಮತ್ತು ಕಾರ್ಬನ್ ಶೀಟ್ ಪ್ರತಿ ಪರಿಶೀಲನೆಗಾಗಿ ಎಫ್​ಎಸ್​ಎಲ್​ಗೆ ಕಳುಹಿಸಲಾಗಿದೆ. ಗೈರಾದವರು ಕಾರ್ಬನ್ ಕಾಪಿ ಕಳೆದು ಹೋಗಿದೆ, ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದೇನೆ ಎಂದೆಲ್ಲ ಕಾರಣ ಕೊಡುತ್ತಿದ್ದಾರೆ.

ಪರೀಕ್ಷಾ ಅಕ್ರಮ ಹೇಗೆ?

ಅಭ್ಯರ್ಥಿಗಳ ಜತೆ ಡೀಲ್ ಕುದುರಿಸುವ ತಂಡ ಪರೀಕ್ಷಾ ಕೇಂದ್ರಗಳನ್ನು ಸಂರ್ಪಸಿ, ಇಂತಿಷ್ಟು ಹಣ ಫಿಕ್ಸ್ ಮಾಡಲು ಮಾತುಕತೆ ಡೀಲ್​ಗೆ ಒಪ್ಪಿದ ಅಭ್ಯರ್ಥಿಗಳೆಲ್ಲ ಒಂದೇ ಪರೀಕ್ಷಾ ಕೇಂದ್ರಕ್ಕೆ ಬರುವ ವ್ಯವಸ್ಥೆ ಮಾಡಿ, ಅಕ್ಕಪಕ್ಕದಲ್ಲೇ ನೋಂದಣಿ ಸಂಖ್ಯೆ ಹಾಕಿಸುತ್ತಾರೆ.

ಡಿಇಡಿ, ಬಿಇಡಿ ಓದಿರುವವರು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿರುತ್ತಾರೆ. ಅವರೇ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಾಗಿ ನಿಯೋಜನೆ ಅಭ್ಯರ್ಥಿ ತಾನು ಅಟೆಂಡ್ ಮಾಡಿದ ಪ್ರಶ್ನೆಗಳ ಸಂಖ್ಯೆ ಓಎಂಆರ್ ಶೀಟ್​ನಲ್ಲಿ ಬರೆಯುವುದು ಕಡ್ಡಾಯ.

ಖಾಲಿ ಬಿಟ್ಟರೆ ಮೇಲ್ವಿಚಾರಕ ಕೇಳಿ, ಬರೆಸಬೇಕು ಮೇಲ್ವಿಚಾರಕರೂ ಭಾಗಿಯಾಗಿರುವ ಹಿನ್ನೆಲೆಯಲ್ಲಿ ಪ್ರಶ್ನೆಗಳ ಸಂಖ್ಯೆ ಬರೆಯದೆ ಓಎಂಆರ್ ಶೀಟ್ ಅನ್ನು ಖಾಲಿ ತೆಗೆದುಕೊಂಡು ಸಹಕರಿಸುತ್ತಾರೆ ಅಭ್ಯರ್ಥಿಗಳು ಬ್ಲೂಟೂತ್ ಡಿವೈಸ್ ಬಳಸಲು ಅವಕಾಶ ಕಲ್ಪಿಸುವ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಕೆಲ ಸಂದರ್ಭದಲ್ಲಿ ಪರೀಕ್ಷೆ ಮುಗಿದ ನಂತರ ಅಭ್ಯರ್ಥಿಯನ್ನು ಮತ್ತೊಂದು ಕೊಠಡಿಗೆ ಕರೆದೊಯ್ದು ಬೇರೆಯವರಿಂದ ಉತ್ತರ ಹೇಳಿಸಿ ಬರೆಸಲಾಗುತ್ತದೆ.

ಸರ್ಕಾರಿ ಶಿಕ್ಷಕರನ್ನೇ ನಿಯೋಜಿಸಿ: ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗೆ ಖಾಸಗಿ ಶಿಕ್ಷಕರನ್ನು ನಿಯೋಜಿಸಲಾಗುತ್ತದೆ. ಅವರು ಹಣದಾಸೆಗೆ ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರಿ ಶಿಕ್ಷಕರನ್ನು ನಿಯೋಜಿಸಿದರೆ ಉತ್ತಮ. ಅಕ್ರಮದಲ್ಲಿ ಸಿಕ್ಕಿಬಿದ್ದರೆ ಕೆಲಸ ಕಳೆದುಕೊಳ್ಳುವ, ಶಿಕ್ಷೆಯಾಗುವ ಭಯ ಇರುತ್ತದೆ. ಖಾಸಗಿಯವರಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ ಎಂಬುದು ಅಧಿಕಾರಿಗಳ ಸಲಹೆ.

ಪ್ರತಿ ನೇಮಕದಲ್ಲೂ ಅಕ್ರಮ: ಪೊಲೀಸ್ ಇಲಾಖೆಯಲ್ಲಿ ನಡೆಯುವ ಪ್ರತಿಯೊಂದು ನೇಮಕಾತಿ ಪ್ರಕ್ರಿಯೆಯಲ್ಲೂ ಒಂದಷ್ಟು ಅವ್ಯವಹಾರ ನಡೆಯುತ್ತದೆ. ಮೊದಲಿನಿಂದಲೂ ಇದು ಜಾರಿಯಲ್ಲಿದೆ. ಆದರೆ, ಬಹಿರಂಗವಾಗುತ್ತಿರಲಿಲ್ಲ ಆದರೆ, ಈ ಬಾರಿ ನೇಮಕಾತಿಯಲ್ಲಿ ಅಕ್ರಮದ ಪ್ರಮಾಣ ಹೆಚ್ಚಾಗಿದೆ. ಬೇರೆಬೇರೆ ಕಾರಣಕ್ಕೆ ಈಗ ಬಯಲಾಗಿದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

ಇದೇ ಮೊದಲು: 2017-18ರಿಂದ 2021-22 ರವರೆಗೆ ಅಂದರೆ 5 ವರ್ಷದಲ್ಲಿ ಒಂದೇ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿವಿಲ್ ಪಿಎಸ್​ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದ್ದು, ಇದೇ ಮೊದಲು. ಆದರೆ, ಇದರಲ್ಲೇ ಇಷ್ಟು ದೊಡ್ಡಮಟ್ಟದಲ್ಲಿ ಅಕ್ರಮ ನಡೆದಿರುವುದೂ ಅನುಮಾನಕ್ಕೆ ಕಾರಣವಾಗಿದೆ. 2017-18ರಲ್ಲಿ 227 ಹುದ್ದೆ, 2018-19ರಲ್ಲಿ 190 ಹುದ್ದೆಗೆ ನೇಮಕಾತಿ ನಡೆದರೆ, 2019-20ರಲ್ಲಿ 3 ಬಾರಿ ನೇಮಕಾತಿ ನಡೆದಿತ್ತು. ಮೊದಲಿಗೆ 300 ಹುದ್ದೆ, ನಂತರ 200 ಹಾಗೂ 12 ಹುದ್ದೆ, 2020-21ರಲ್ಲಿ ಒಂದೇ ಬಾರಿಗೆ 543 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ನೇಮಕಾತಿ ಆರಂಭಕ್ಕೂ ಮುನ್ನವೇ ಡೀಲ್ ನಿಗದಿಯಾಗಿತ್ತೇ ಎಂಬ ಶಂಕೆಯೂ ಮೂಡಿದೆ.

ಜಾತಿ ಆಧಾರದಲ್ಲಿ ರೇಟ್!: ಅಭ್ಯರ್ಥಿಯ ಜಾತಿ ಆಧಾರದಲ್ಲಿ ಡೀಲ್ ಹಣ ನಿಗದಿಯಾಗಿತ್ತೆಂದು ಹೇಳಲಾಗುತ್ತಿದೆ. ಜನರಲ್ ಕೆಟಗರಿಯವರಿಗೆ ಒಂದು ರೇಟ್, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೇ ಒಂದು ದರ, ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೇ ಒಂದು ರೇಟ್. ಒಟ್ಟಾರೆ 40 ರಿಂದ 1 ಕೋಟಿ ರೂ.ವರೆಗೆ ರೇಟ್ ಫಿಕ್ಸ್ ಮಾಡಲಾಗಿತ್ತು. ಈಗಾಗಲೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಕಾನ್​ಸ್ಟೇಬಲ್​ಗಳೂ ಭಾಗಿಯಾಗಿದ್ದು, ಅವರಿಗೂ ಮತ್ತೊಂದು ರೇಟ್ ನಿಗದಿಪಡಿಸಲಾಗಿತ್ತು.

ಡೀಲ್​ನಲ್ಲಿ ಇಬ್ಬರು ಡಿವೈಎಸ್ಪಿ, ಇನ್​ಸ್ಪೆಕ್ಟರ್?: ಪಿಎಸ್​ಐ ಹುದ್ದೆ ನೇಮಕಾತಿ ಹಗರಣದ ಕಿಂಗ್​ಪಿನ್ ದಿವ್ಯಾ ಹಾಗರಗಿ ಬಂಧನದ ನಂತರ ಅಕ್ರಮದಲ್ಲಿ ಇಬ್ಬರು ಡಿವೈಎಸ್ಪಿ ಹಾಗೂ ಒಬ್ಬ ಇನ್​ಸ್ಪೆಕ್ಟರ್ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪೊಲೀಸ್ ಅಧಿಕಾರಿಗಳ ಭಾಗಿ ಬಗ್ಗೆ ಸಿಐಡಿ ಸಾಕ್ಷ್ಯ ಸಂಗ್ರಹಿಸುತ್ತಿದೆ. ಮೂರು ಹಂತದಲ್ಲಿ ಹಣ ವಿತರಣೆ ಪರೀಕ್ಷೆ ಬರೆಯುವ ಮುನ್ನ, ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಯಾದ ನಂತರ ನೇಮಕಾತಿ ಆದೇಶ ಪತ್ರ ಕೈ ಸೇರಿದಾಗ ಹಣ ಕೊಡುವ ಮಾತುಕತೆ ನಡೆದಿತ್ತೆನ್ನಲಾಗಿದೆ. ಡೀಲ್ ಆದ ಅಭ್ಯರ್ಥಿಗಳು ಈಗಾಗಲೇ 2 ಹಂತದಲ್ಲಿ ಹಣ ಕೊಟ್ಟಿದ್ದು, ಆದೇಶ ಪತ್ರ ಸಿಕ್ಕ ನಂತರ ಬಾಕಿ ಮೊತ್ತ ಕೊಡಬೇಕಿತ್ತು.

Edited By : Nagaraj Tulugeri
PublicNext

PublicNext

02/05/2022 06:01 pm

Cinque Terre

88.77 K

Cinque Terre

3

ಸಂಬಂಧಿತ ಸುದ್ದಿ