ಬೆಂಗಳೂರು: ಪಿಎಸ್‌ಐ ಪರೀಕ್ಷೆಯಲ್ಲಿ ನಡೆದ ಅಕ್ರಮ ಕುರಿತು ಮತ್ತೊಮ್ಮೆ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಹಗರಣದಲ್ಲಿ ಕಾಂಗ್ರೆಸ್ ನಾಯಕರ ವರ್ತನೆಯೇ ಅನುಮಾನ ಸೃಷ್ಟಿಸುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಒಂದೆಡೆ ಕುಳಿತು ಮೊದಲು ಒಮ್ಮತದ ನಿರ್ಧಾರ ಕೈಗೊಳ್ಳಿ ಎಂದು ರಾಜ್ಯ ಬಿಜೆಪಿ ಕೈ ನಾಯಕರಿಗೆ ಸಲಹೆ ನೀಡಿದೆ.
ಸರ್ಕಾರ 545 ಪಿಎಸ್‌ಐ ಹುದ್ದೆಗಳಿಗಾಗಿ ನಡೆಸಿದ ಪರೀಕ್ಷೆಯನ್ನು ರದ್ದುಪಡಿಸಿದ್ದು ಸರಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದ್ರೆ ಭ್ರಷ್ಟಾಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಪ್ರಿಯಾಂಕ್ ಖರ್ಗೆ ವಿರೋಧಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರ ಈ ವರ್ತನೆ ಅನುಮಾನ ಸೃಷ್ಟಿಸುತ್ತಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.
'ಪಿಎಸ್‌ಐ ನೇಮಕಾತಿ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ತನಿಖೆಯ ವಿಚಾರದಲ್ಲಿ ಎಲ್ಲಿಯೂ ಎಡವಿಲ್ಲ. ವಿಳಂಬವೂ ಮಾಡಿಲ್ಲ. ಹಗರಣದ ಹಿನ್ನೆಲೆಯಲ್ಲಿ ನೇಮಕಾತಿ ರದ್ದು ಮಾಡಲಾಗಿದೆ. ಆರೋಪಿಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಾಗುತ್ತಿದೆ. ಇಷ್ಟಾದ ಮೇಲೂ ಕಾಂಗ್ರೆಸ್ ಏಕೆ ಕಳವಳಗೊಳ್ಳುತ್ತಿದೆ?' ಎಂದು ಬಿಜೆಪಿ ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್‌ನಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರ ಮೇಲೆ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಾಗೂ ವರ್ತನೆ ನೋಡಿದರೆ ಈ ಹಗರಣದ ಬಗ್ಗೆ ಅಪಾರ ಜ್ಞಾನ ಹಾಗೂ ಸಂಬಂಧ ಹೊಂದಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದೆ.
'ಪ್ರಿಯಾಂಕ್ ಖರ್ಗೆ ಅವರೇ, ಸಿಐಡಿ ನೋಟಿಸ್‌ಗೆ ನೇರವಾಗಿ ಉತ್ತರಿಸಲು ಅಳುಕೇಕೆ? ಹಗರಣದಲ್ಲಿ ನಿಮ್ಮ ಪಾಲು ಹಾಗೂ ಭಾಗ ಏನೆಂಬುದು ಬಯಲಾಗಬಹುದೆಂಬ ಭಯ ನಿಮ್ಮನ್ನು ಕಾಡುತ್ತಿದೆಯೆ? ಎಂದು ಪ್ರಶ್ನೆ ಮಾಡಲಾಗಿದೆ.
PublicNext
02/05/2022 04:02 pm