ಲಖನೌ (ಉತ್ತರ ಪ್ರದೇಶ): ಲಿಖಿಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಎಸ್‌ಯುವಿ ಕಾರು ಹರಿಸಿದ ಪರಿಣಾಮ ನಾಲ್ವರು ರೈತರು ಸೇರಿ ಒಟ್ಟು 8 ಜನರು ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆಶಿಶ್ ಮಿಶ್ರನನ್ನು ಬಂಧಿಸಲಾಗಿದೆ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಯಾವುದೇ ಪ್ರಶ್ನೆ ಕೇಳಿದರೂ "ನಾನು ಅಲ್ಲಿರಲಿಲ್ಲ" ಎಂದಷ್ಟೇ ಉತ್ತರ ನೀಡಿರುವುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಶನಿವಾರ ಸುಮಾರು 12 ತಾಸುಗಳ ಕಾಲ ಪೊಲೀಸರು ಲಖಿಂಪುರ್ ಖೇರಿ ಹಿಂಸಾಚಾರ ಆರೋಪಿ ಆಶಿಶ್‌ನನ್ನು ವಿಚಾರಣೆಗೆ ಒಳಪಡಿಸಿದರು. ಎಸ್‌ಯುವಿ ಚಾಲನೆ ಮಾಡುತ್ತಿದ್ದವರು ಯಾರು, ಅದರಲ್ಲಿ ಎಷ್ಟು ಜನರಿದ್ದರು, ಬೆಂಗಾವಲು ಪಡೆಯಲ್ಲಿ ಎಷ್ಟು ವಾಹನಗಳಿದ್ದವು? ಇತ್ಯಾದಿ ಪ್ರಶ್ನೆ ಕೇಳಿದರೂ ಆತ ನೀಡುತ್ತಿದ್ದುದು, ‘ನಾನು ಅಲ್ಲಿರಲಿಲ್ಲ’ ಎಂಬ ಒಂದೇ ಉತ್ತರವಾಗಿತ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಆತ ‘ನೀವು ಲಕ್ಷ ಸಲ ಕೇಳಿದರೂ ನನ್ನ ಉತ್ತರದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಕಿರುಚಿದ್ದಾನೆ. ಇನ್ನು ಈತನನ್ನು ಪ್ರಶ್ನೆ ಮಾಡುತ್ತ ಕೂರುವುದರಲ್ಲಿ ಅರ್ಥವಿಲ್ಲ ಎಂಬ ತೀರ್ಮಾನಕ್ಕೆ ಬಂದ ಪೊಲೀಸರು, ತನಿಖೆಗೆ ಅಸಹಕಾರ ಮತ್ತು ಹಾರಿಕೆ ಉತ್ತರ ನೀಡಿದ ಕಾರಣ ಕೊಟ್ಟು ತಡರಾತ್ರಿ ಬಂಧಿಸಿದರು ಎಂದು ಮೂಲಗಳು ತಿಳಿಸಿವೆ.
PublicNext
11/10/2021 07:42 am