ಬೆಂಗಳೂರು: ಡಿ.ಕೆ ರವಿ ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದ್ರೆ ಅವರು ಪ್ರಚಾರಪ್ರಿಯರಾಗಿದ್ದರು. ಮರಳು ಮಾಫಿಯಾ ಹಾಗೂ ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದರು. ನಂತರ ಕಾರ್ಯಾಚರಣೆ ಕೈಗೊಳ್ಳುತ್ತಿದ್ದರು ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಕುರಿತಾದ 'ನಗ್ನಸತ್ಯ' ಪುಸ್ತಕ ಬಿಡುಗಡೆಗೊಳಿಸಿ ನಂತರ ಸಿದ್ದರಾಮಯ್ಯ ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ 2015 ಮಾರ್ಚ್ ತಿಂಗಳು 16ರಂದು ಡಿ.ಕೆ ರವಿ ಆತ್ಮಹತ್ಯೆ ಮಾಡಿಕೊಂಡರು. ಆಗ ವಿಧಾನ ಮಂಡಲ ಅಧಿವೇಶನ ನಡೆಯುತ್ತಿತ್ತು. ಹೀಗಾಗಿ ವಿಪಕ್ಷಗಳು ನಮ್ಮ ಸರ್ಕಾರದ ಮೇಲೆ ಪ್ರಹಾರ ಮಾಡಲು ಈ ಘಟನೆಯನ್ನು ಅಸ್ತ್ರವಾಗಿ ಬಳಸಿಕೊಂಡವು. ನಮ್ಮ ಸರ್ಕಾರದ ಅವಧಿಯಲ್ಲಿ ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ ರವಿ ಅವರನ್ನು ವರ್ಗಾವಣೆ ಮಾಡುವಂತೆ ಯಾವ ಶಾಸಕರೂ ಹೇಳಿರಲಿಲ್ಲ. ಅವರ ಮಾವ ಹನುಮಂತರಾಯಪ್ಪ ಅವರು ರಮೇಶ್ ಕುಮಾರ್ ಅವರೊಂದಿಗೆ ಬಂದು ತಮ್ಮ ಮಗಳು ಬೆಂಗಳೂರಿನಲ್ಲಿ ಇದ್ದಾರೆ. ಹೀಗಾಗಿ ಬೆಂಗಳೂರು ನಗರಕ್ಕೆ ರವಿ ಅವರನ್ನು ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ್ದರು. ಆಗ ನಾನು ಅವರನ್ನು ಕಮರ್ಷಿಯಲ್ ಟ್ಯಾಕ್ಸ್ ಹಾಗೂ ಎನ್ಫೋರ್ಸ್ ಮೆಂಟ್ ಇಲಾಖೆಯ ಸಹಾಯಕ ಹುದ್ದೆಗೆ ವರ್ಗಾವಣೆ ಮಾಡಿದ್ದೆ. ಆದ್ರೆ ಅವರು ಕೋಲಾರದ ಡಿ.ಸಿ ಆಗಿ ಮುಂದುವರೆದರು ಎಂದು ಸಿದ್ದರಾಮಯ್ಯ ಹೇಳಿದರು.
ಏಕಮುಖ ಪ್ರೇಮ ಅಪಾಯಕಾರಿ. ಪರರ ಭಾವನೆಗಳನ್ನು ಅರ್ಥೈಸಿಕೊಳ್ಳದೇ ಆತ್ಮಹತ್ಯೆಗೆ ಶರಣಾಗುವುದು ಮೂರ್ಖತನದ ಪರಮಾವಧಿ. ನಮ್ಮ ಸರ್ಕಾರ ಇದ್ದಾಗಲೇ ಸಿಬಿಐ ವರದಿಯನ್ನು ಜನರ ಮುಂದೆ ಇಡಬೇಕಿತ್ತು. ಆದ್ರೆ ಸಾವಿನ ಹಿಂದಿನ ಸತ್ಯ ಆಗಲೇ ಬಹಿರಂಗವಾಗಿತ್ತು. ಹೀಗಾಗಿ ನಾವು ಆ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
PublicNext
03/10/2021 10:29 pm