ಲಕ್ನೋ: ತಾಲಿಬಾನಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಮಾಜವಾದಿ ಪಕ್ಷದ ಸಂಸದ ಸೇರಿದಂತೆ ಮೂವರ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಅರಾಜಕತೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಮಾಜವಾದಿ ಪಕ್ಷದ ಸಂಸದ ಶಫೀಖುರ್ ರೆಹಮಾನ್ ಬರ್ಖ್, "ಬ್ರಿಟಿಷರು ಭಾರತವನ್ನಾಳುತ್ತಿದ್ದಾಗ, ನಮ್ಮ ದೇಶ ಸ್ವಾತಂತ್ರ್ಯಕ್ಕಾಗಿ ಹೋರಾಡಿತು. ಈಗ ತಾಲಿಬಾನ್ ತಮ್ಮ ದೇಶವನ್ನು ಸ್ವತಂತ್ರಗೊಳಿಸಿಕೊಂಡು, ತಾವೇ ನಡೆಸಲು ಇಚ್ಛಿಸುತ್ತಾರೆ. ತಾಲಿಬಾನ್, ರಷ್ಯಾ ಮತ್ತು ಅಮೆರಿಕದಂತಹ ಬಲಶಾಲಿಗಳನ್ನು ತಮ್ಮ ದೇಶದಲ್ಲಿ ನೆಲೆಸಲು ಬಿಡದಂಥ ಶಕ್ತಿಯಾಗಿದೆ" ಎಂದು ಮಂಗಳವಾರ ಹೇಳಿಕೆ ನೀಡಿದ್ದರು.
ಈ ಬಗ್ಗೆ ಮಾಹಿತಿ ನೀಡಿರುವ ಸಂಭಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚರ್ಖೇಶ್ ಮಿಶ್ರಾ, "ತಾಲಿಬಾನಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಎಸ್‌ಪಿ ಸಂಸದ ಶಫೀಖುರ್ ರೆಹಮಾನ್ ಬರ್ಖ್ ವಿರುದ್ಧ 'ದೇಶದ್ರೋಹ' ಪ್ರಕರಣ ದಾಖಲಿಸಲಾಗಿದೆ. ಆದ್ದರಿಂದ ಸಂಸದ ಶಫೀಖುರ್ ಐಪಿಸಿ ಸೆಕ್ಷನ್ 124A (ದೇಶದ್ರೋಹ), 153A, 295 ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಷ್ಟೇ ಅಲ್ಲದೆ ಜಿಲ್ಲೆಯ ಇನ್ನಿಬ್ಬರು ವ್ಯಕ್ತಿಗಳು ಫೇಸ್ಬುಕ್ನಲ್ಲಿ ತಾಲಿಬಾನ್ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ" ಎಂದು ತಿಳಿಸಿದ್ದಾರೆ.
ಆದರೆ ಸಂಸದ ಬರ್ಖ್, ತಾವು ಆ ರೀತಿ ಹೇಳಿಕೆ ನೀಡಿಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ. "ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ನಾನು ಭಾರತದ ನಾಗರಿಕ, ಅಫ್ಘಾನಿಸ್ತಾನದ ನಾಗರಿಕನಲ್ಲ. ಆದ್ದರಿಂದ ಅಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನನಗೆ ಯಾವ ಕಾಳಜಿ ಇಲ್ಲ. ನಾನು ನನ್ನ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ.
PublicNext
18/08/2021 05:14 pm