ಶ್ರೀನಗರ: ಜಮ್ಮು-ಕಾಶ್ಮೀರದ ರಜೌರಿಯಲ್ಲಿರುವ ಬಿಜೆಪಿ ಕಾರ್ಯಕರ್ತನನ್ನು ಟಾರ್ಗೆಟ್ ಮಾಡಿ ಉಗ್ರರು ನಡೆಸಿದ ದಾಳಿಗೆ 4 ವರ್ಷದ ಕಂದ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.
ರಾಜೌರಿಯಲ್ಲಿ ಉಗ್ರರು ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ನಿವಾಸದ ಮೇಲೆ ನಿನ್ನೆ ರಾತ್ರಿ ಗ್ರೆನೇಡ್ ಎಸೆದಿದ್ದಾರೆ. ಈ ದಾಳಿಯ ಪರಿಣಾಮ ಜಸ್ಬೀರ್ ಸಿಂಗ್ ಅವರ ಕುಟುಂಬದ ಏಳು ಮಂದಿ ಸದಸ್ಯರಿಗೆ ಗಾಯಗಳಾಗಿವೆ. ಆದರೆ ವೀರ್(4) ಮಗುವಿನ ಸ್ಥಿತಿ ಗಂಭೀರವಾಗಿದ್ದು, ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರ್ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ರಜೌರಿಯ ಜಿಲ್ಲಾಧಿಕಾರಿ ರಾಜೇಶ್ ಕುಮಾರ್, ಮೇಲ್ನೋಟಕ್ಕೆ ಗ್ರೆನೇಡ್ ಎಸೆದು ಸ್ಫೋಟ ಮಾಡಿದಂತೆ ಕಾಣುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಎಫ್ಐಆರ್ ಹಾಕಿದ್ದಾರೆ. ದುರ್ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
PublicNext
13/08/2021 02:42 pm