ಹಾಸನ: ಬಿಜೆಪಿ ಕಾರ್ಯಕರ್ತನನ್ನು ಕೊಲೆಗೈದ ದುಷ್ಕರ್ಮಿಗಳು, ಶವದ ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದಿರುವ ಘಟನೆ ಹೊಳೆನರಸೀಪುರ ತಾಲೂಕು ಮಾರಗೊಂಡನಹಳ್ಳಿಯಲ್ಲಿ ನಡೆದಿದೆ.
ಮಾರಗೊಂಡನಹಳ್ಳಿ ಗ್ರಾಮದ ನಿಂಗಪ್ಪ ಎಂಬುವರ ಪುತ್ರ ಎಂ.ಎನ್. ಮೂರ್ತಿ(50) ಕೊಲೆಯಾದ ದುರ್ದೈವಿ. ಮನೆಯಿಂದ ಹೋದ ಮೂರ್ತಿ ವಾಪಸ್ಸ್ ಬಂದಿರಲಿಲ್ಲ. ಸೋಮವಾರ ಗ್ರಾಮದ ಕೆರೆಯಲ್ಲಿರುವ ಬಾವಿಯಲ್ಲಿ ಮನುಷ್ಯನ ಕಾಲು ಕಾಣಿಸುತ್ತಿತ್ತು. ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಅಲ್ಲಿದ್ದ ಮೃತದೇಹ ಮೂರ್ತಿಯದ್ದಾಗಿತ್ತು.
ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಮೂರ್ತಿ ಇತ್ತೀಚಿಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆ ಊರಿಗೆ ಬಂದಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಫಲಿತಾಂಶ ಹೊರ ಬಂದ ಬಳಿಕ ಪಟಾಕಿ ಹೊಡೆಯುವ ವಿಚಾರವಾಗಿ ಜೆಡಿಎಸ್-ಬಿಜೆಪಿ ಬೆಂಬಲಿತರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಜೆಡಿಎಸ್-ಬಿಜೆಪಿ ಬೆಂಬಲಿತರ ಗಲಾಟೆ ಪ್ರಕರಣದಲ್ಲಿ ಮೂರ್ತಿ ಅವರ ಸಹೋದರಿಬ್ಬರು ತಲೆಮರೆಸಿಕೊಂಡಿದ್ದು, ಜಮೀನು ನೋಡಿಕೊಳ್ಳುವ ಸಲುವಾಗಿ ಮೂರ್ತಿ ಊರಿನಲ್ಲೇ ಉಳಿದುಕೊಂಡಿದ್ದರು. ಇದೀಗ ದುರ್ಮರಣಕ್ಕೀಡಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ರಾಜಕೀಯ ದ್ವೇಷಕ್ಕೆ ದುಷ್ಕರ್ಮಿಗಳು ಮೂರ್ತಿಯನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
PublicNext
18/01/2021 03:28 pm