ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಕೇಸ್‌ನಲ್ಲಿ ಸ್ವತಃ ಎಡಿಜಿಪಿ ಅಮೃತ್ ಪೌಲ್ ಅವರೇ ಭಾಗಿಯಾಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ಅವರ ಬಂಧನದ ಮೂಲಕ ಕೇಸ್‌ನ ತನಿಖೆಯಲ್ಲಿ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಒಬ್ಬೊಬ್ಬ ಅಭ್ಯರ್ಥಿಯಿಂದ ಸುಮಾರು 30 ಲಕ್ಷದಿಂದ 1 ಕೋಟಿ ವರೆಗೂ ವಸೂಲಿ ಮಾಡಲಾಗಿದೆ. ಈ ಎಲ್ಲ ಹಣ ಯಾವ ಮಂತ್ರಿಗೆ ಹೋಗಿದೆ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಹಾಗೂ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಸಚಿವ ಡಾ. ಸಿ.ಎಸ್ ಅಶ್ವತ್ಥನಾರಾಯಣ ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಅಶ್ವಥ್ ನಾರಾಯಣ್ ಸಂಬಂಧಿಕರು ಮಾರ್ಕ್ಸ್ ತಿದ್ದಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಹೀಗಿದ್ದಾಗ ಸಿಐಡಿ ತನಿಖೆಯಿಂದ ಯಾವ ನ್ಯಾಯ ಸಿಗಲು ಸಾಧ್ಯ? ಪಿಎಸ್ಐ ನೇಮಕಾತಿ ಉಸ್ತುವಾರಿ ವಹಿಸಿರುವ ಎಡಿಜಿಪಿ ಅಮೃತ್ ಪಾಲ್ ಅವರನ್ನೇ ಈಗ ಬಂಧಿಸಲಾಗಿದೆ. ಈ ಹಗರಣವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದಾಗ ಯಾವ ಭ್ರಷ್ಟಾಚಾರವೂ ನಡೆದಿಲ್ಲ ಎಂದು ವಾದಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಗೃಹಸಚಿವರು ಈಗೇನು ಹೇಳುತ್ತಾರೆ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಜಿಲ್ಲಾಧಿಕಾರಿ ಮಂಜುನಾಥ್ ಬಂಧನದ ಪ್ರಕರಣದಲ್ಲಿ ತಮ್ಮನ್ನು ಯಾರೋ ಬೆದರಿಸಿದ್ದಾರೆ ಎಂದು ನ್ಯಾಯಮೂರ್ತಿಗಳೇ ಖುದ್ದಾಗಿ ವಿಚಾರಣೆ ಕಾಲದಲ್ಲಿ ಹೇಳಿದ್ದಾರೆ. ನ್ಯಾಯಮೂರ್ತಿಗಳನ್ನೇ ಬೆದರಿಸುವಷ್ಟು ಶಕ್ತಿಶಾಲಿ ವ್ಯಕ್ತಿ ಯಾರು? ಆ ವ್ಯಕ್ತಿಗೂ, ಸರ್ಕಾರಕ್ಕೂ ನೇರವಾದ ಸಂಬಂಧ ಇದೆಯೇ? ಎಂಬ ಬಗ್ಗೆ ತನಿಖೆಯಾಗಬೇಕು. ರಾಜ್ಯದ ಎಸಿಬಿ (ಆ್ಯಂಟಿ ಕರಪ್ಷನ್ ಬ್ಯೂರೋ) ಅನ್ನು ಕಲೆಕ್ಷನ್ ಬ್ಯೂರೋ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಎಸಿಬಿ ಯನ್ನು ನಾವೇ ಹುಟ್ಟುಹಾಕಿದ್ದು ನಿಜ, ಆದರೆ ಅದನ್ನು ದುರ್ಬಳಕೆ ಮಾಡಿಕೊಂಡು ನಮ್ಮ ರಾಜಕೀಯ ವಿರೋಧಿಗಳನ್ನು ಮಣಿಸಲು ರಾಜಕೀಯ ಅಸ್ತ್ರವನ್ನಾಗಿ ಮಾಡಿರಲಿಲ್ಲ. ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆರಗ ಜ್ಞಾನೇಂದ್ರ ಅವರು ತಮ್ಮ ಮಾತು ಮತ್ತು ನಡವಳಿಕೆಗಳಿಂದ ತಾವೊಬ್ಬ ಬೇಜವಾಬ್ದಾರಿ ಸಚಿವ ಎಂದು ಸಾಬೀತು ಪಡಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದಿದ್ದ ಕೋಮುಘರ್ಷಣೆ, ಮೈಸೂರಿನಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳಲ್ಲಿ ಗೃಹಸಚಿವರ ಸುಳ್ಳು ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಇಂಥವರು ಗೃಹ ಸಚಿವರಾಗಲು ಲಾಯಕಿಲ್ಲ ಎಂದು ಜನರೇ ಆಡಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
PublicNext
05/07/2022 06:59 pm