ದಾವಣಗೆರೆ: "ಸಚಿವ ಬಿ. ಸಿ. ನಾಗೇಶ್ ಮನೆಗೆ ನುಗ್ಗಲು ಬಂದಿದ್ದವರ ಪೈಕಿ ಬಹಳಷ್ಟು ಮಂದಿ ವಿದ್ಯಾರ್ಥಿಗಳಲ್ಲ. ಬೆಂಗಳೂರು, ಹಾಸನದಿಂದ ಹಾಗೂ ದಾವಣಗೆರೆಯಿಂದಲೂ ಮೂವರು ಬಂದಿದ್ದರು. ಅವರ ಹಿನ್ನೆಲೆ ಏನು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮನೆಯೊಳಗೆ ನುಗ್ಗಿ ಅವರ ನಿಕ್ಕರ್ ನ ತೆಗೆದುಕೊಂಡು ಬಂದು ಹಗಲು ಹೊತ್ತಿನಲ್ಲಿ ಬೆಂಕಿ ಹಚ್ಚಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಹೇಗಿರಬೇಕು ಹೇಳಿ. ನಾವು ಹೋರಾಟ ಮಾಡಿ ಬಂದಿದ್ದೇವೆ. ಯಾರದ್ದೋ ಮನೆಗೆ ನುಗ್ಗೋದು, ಏನೇನೋ ಮಾಡೋದು ಹೋರಾಟ ಅಲ್ಲ. ಕಾನೂನು ಪ್ರಕಾರ ಪೊಲೀಸರು ಬಂಧಿಸಿದ್ದಾರೆ. ಶಿಕ್ಷೆಯೂ ಆಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಗೇಶ್ ರ ಮನೆ ಮುಂದೆ ಹೋರಾಟ ಮಾಡಲು ಅನುಮತಿ ತೆಗೆದುಕೊಂಡಿರಲಿಲ್ಲ. ತಹಶೀಲ್ದಾರ್, ಡಿಸಿ, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಏಕಾಏಕಿ ಮನೆಗೆ ನುಗ್ಗಿದಾಗ ಪೊಲೀಸರು ತಡೆಯುವ ಕೆಲಸ ಮಾಡಿದ್ದಾರೆ. ತಿಪಟೂರಿನ ಒಬ್ಬರು ಬಿಟ್ಟರೆ ಬೇರೆ ಕಡೆಯಿಂದ ಕಾರಿನಲ್ಲಿ ಬಂದು ಈ ರೀತಿ ವರ್ತಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಎಲ್ಲೆಲ್ಲಿ ಸಮವಸ್ತ್ರ ಕಡ್ಡಾಯ ಇದೆಯೋ ಅಲ್ಲಿ ಅದನ್ನು ಪಾಲಿಸಲೇಬೇಕು. ಒಂದೆರಡು ಕಡೆ ಸಮಸ್ಯೆ ಇದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಿಗೆ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದಿದ್ದರೆ ಪೊಲೀಸರ ಮಧ್ಯಪ್ರವೇಶ ಆಗುತ್ತದೆ ಎಂದು ತಿಳಿಸಿದರು.
PublicNext
08/06/2022 05:25 pm