ಮಂಡ್ಯ: ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ಬರುವಂತೆ Death Note ಬರೆದಿಟ್ಟು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅಭಿಮಾನಿಯ ಕೊನೆಯಾಸೆ ಈಡೇರಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ನಟ ಯಶ್ ಟ್ವೀಟ್ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅಭಿಮಾನಿ ಆತ್ಮಹತ್ಯೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪಾಪ ಆತ ನನಗೆ ಗೊತ್ತಿಲ್ಲದೆಯೇ ದೊಡ್ಡ ಅಭಿಮಾನಿಯಾಗಿದ್ದ. ಅಂತ್ಯಕ್ರಿಯೆಗೆ ಬರಬೇಕು ಎಂದು ಡೆತ್ ನೋಟ್ ಬರೆದುಕೊಂಡಿದ್ದ. ನನಗೆ ಈ ವಿಷಯ ತಿಳಿದ ಮೇಲೆ ಅಂತಿಮ ದರ್ಶನ ಪಡೆಯಲು ಬಂದಿದ್ದೇನೆ. ನನಗೆ ಆತ ಅಷ್ಟೇನು ಪರಿಚಯ ಇರಲಿಲ್ಲ. ಅಭಿಮಾನಿಯಾಗಲಿ, ಆಗದೇ ಇರಲಿ, ಅಂತ್ಯಕ್ರಿಯೆಗೆ ಬರಬೇಕು ಎಂದು ಬರೆದುಕೊಂಡಿದ್ದ. ಹಾಗಾಗಿ ನಾನು ಬಂದಿದ್ದೇನೆ. ಪಾಪ ಸಾಮಾನ್ಯ ಕುಟುಂಬದಿಂದ ಬಂದಿದ್ದು, ಮನೆಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಆತ. ಈತನ ಸಾವಿನಿಂದ ಮನೆಯವರಿಗೆ ನಷ್ಟ ಆಗಿದೆ. ಆತನ ತಾಯಿ, ಅಣ್ಣನನ್ನು ನಾನು ಮಾತನಾಡಿಸಿದೆ. ಪ್ರಾಣ ಕಳೆದುಕೊಂಡಿರುವುದು ಕುಟುಂಬಕ್ಕೆ ಮಾತ್ರ ಅಲ್ಲ ಸಮಾಜಕ್ಕೂ ನಷ್ಟವಾಗಿದೆ.ಆತನ ಆತ್ಮಕ್ಕೆ ಶಾಂತಿ ಸಿಗಲಿ.
ಆತ್ಮಹತ್ಯೆ ಯಾವುದೇ ಸಮಸ್ಯೆಗೂ ಪರಿಹಾರ ಅಲ್ಲ. ಎಷ್ಟೇ ತೊಂದರೆ ಇರಲಿ, ಸಮಸ್ಯೆ ಇರಲಿ, ಮನೆಯವರ ಜೊತೆ ಸ್ನೇಹಿತರ ಜೊತೆ ಕೂತು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಸಾವಿಗೆ ಮಿಡಿದಿದ್ದಾರೆ.ಅಭಿಮಾನಿಗಳ ಅಭಿಮಾನಕ್ಕೆ ಇದು ಮಾದರಿಯಾಗದಿರಲಿ ಎಂದು ನಟ ಯಶ್ ಹೇಳಿದ್ದಾರೆ. 15 ವರ್ಷದ ಹಿಂದೆ ರಾಮ ಕೃಷ್ಣ ತಂದೆ ಚಂದ್ರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
PublicNext
18/02/2021 04:03 pm