ಧಾರವಾಡ- ನಾನು ಕಾಂಗ್ರೆಸ್ ಸೇರಿದ್ದರೂ ನ್ಯಾಯ ಮುಖ್ಯ. ರಾಜಕೀಯ ಅಲ್ಲ. ನನಗೆ ನನ್ನ ಮಕ್ಕಳ ಭವಿಷ್ಯ ಮುಖ್ಯ. ಪತಿಯ ಕೊಲೆ ಪ್ರಕರಣ ತಾರ್ಕಿಕ ಹಂತಕ್ಕೆ ಬರುತ್ತಿದೆ ಎಂದು ಕೊಲೆಯಾದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಹೇಳಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಕೇಸಿಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯೋಗೀಶ್ ಗೌಡ ಪತ್ನಿ ಮಲ್ಲಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದೆ. ಮತ್ತು ನಡೆದೇ ನಡೆಯುತ್ತೆ. ನಾನು ಕಾಂಗ್ರೆಸ್ ಸೇರಿದ್ದರೂ ಕೊಲೆ ಪ್ರಕರಣದ ಕುರಿತಾಗಿ ಎಂದೂ ಎರಡು ಭಾವನೆ ಮಾಡಿಲ್ಲ ಎಂದರು.
ನಾನು ಯಾರನ್ನೂ ನೋಡಿ ಕಾಂಗ್ರೆಸ್ ಸೇರಿಲ್ಲ. ನನ್ನ ಮೇಲೆ ಯಾರೋ 2 ಬಾರಿ ದಾಳಿ ಮಾಡಿದ್ದರು. ಆಗ ನಾನು ಸಂಸದ ಪ್ರಹ್ಲಾದ್ ಜೋಶಿ ಕಾಲು ಬಿದ್ದಿದ್ದೆ. ಅವರು ಯಾವುದಕ್ಕೂ ಸ್ಪಂದಿಸಲಿಲ್ಲ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಕಷ್ಟ ಅನುಭವಿಸಿದ್ದೇನೆ. ನಾನು ವಿನಯ್ ಕುಲಕರ್ಣಿ ಮೂಲಕ ಪಕ್ಷ ಸೇರಿಲ್ಲ. 30 ಲಕ್ಷ ಸಾಲ ಮಾಡಿಸಿ ಜಿಲ್ಲಾ ಪಂಚಾಯತಿ ಚುನಾವಣೆ ಮಾಡಿಸಿದ್ರು. ತಾನೇ ನನ್ನ ಹೊಲ ಮಾರಿಸಿಕೊಳ್ಳಲು ಮುಂದಾದ್ರು. ನನ್ನ ಆಸ್ತಿ ಹೋಗುತ್ತದೆಂಬ ಕಾರಣಕ್ಕೆ ನಾನು ಕಾಂಗ್ರೆಸ್ ಸೇರಿದ್ದೇನೆ. ಈ ಕೇಸಿನಲ್ಲಿ ವಿನಯ್ ಕುಲಕರ್ಣಿ ಕೈವಾಡ ಇದೆಯೋ ಇಲ್ಲವೋ ಎಂಬುದನ್ನು ಸಿಬಿಐ ಅಧಿಕಾರಿಗಳು ತನಿಖೆ ಮೂಲಕ ಹೊರತೆಗೆಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಮಲ್ಲಮ್ಮ ಹೇಳಿದ್ದಾರೆ.
PublicNext
05/11/2020 11:46 am