ಪಬ್ಲಿಕ್ ನೆಕ್ಸ್ಟ್ ಸಂಪಾದಕೀಯ : ಕೇಶವ ನಾಡಕರ್ಣಿ
" ಸುಮ್ನೆ ಇರಲಾರದೆ ಇರುವೆ ಬಿಟ್ಟಕೊಂಡ್ರು'' ಎಂಬಂತಾಗಿದೆ ಕಾಂಗ್ರೆಸ್ಸಿನವರ ಪರಿಸ್ಥಿತಿ.
ಎಲ್ಲದರಲ್ಲೂ ರಾಜಕೀಯ ಮಾಡಿ ಬಿಜೆಪಿಯನ್ನು ಹಣಿಯಲು ಹೋಗಿ ತಾವೇ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಅದರಲ್ಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಅವಕಾಶ ಸಿಕ್ಕಿದ್ದೇ ತಡ ಹಿಂದೆ ಮುಂದೆ ವಿಚಾರಿಸದೆ ಬಿಜೆಪಿ ಮೇಲೆ ಮುಗಿಬೀಳುತ್ತಾರೆ.
ಇದರಿಂದ ಅವರಿಗೆ ರಾಜಕೀಯವಾಗಿ ಎಷ್ಟು ಲಾಭವಾಗುತ್ತೋ ಇಲ್ಲವೋ ಗೊತ್ತಿಲ್ಲ ಆದ್ರೆ ಸಿದ್ದರಾಮಯ್ಯನವರ ಅನುಕಂಪ, ಸಹಾನುಭೂತಿ ಪಡೆಯಲು ಹೋದವರಂತೂ ಸಮಸ್ಯೆ ಸುಳಿಗೆ ಬೀಳುವುದು ಖಚಿತ. ಇದಕ್ಕೆ ತಾಜಾ ಉದಾಹರಣೆ ಎಂದರೆ ಅಪ್ಪು ನಟನೆಯ ಜೇಮ್ಸ್ V/S ದಿ. ಕಾಶ್ಮೀರ್ ಫೈಲ್ಸ್ ಚಿತ್ರ. ಅವುಗಳ ಪಾಡಿಗೆ ಅವು ಓಡ್ತಾ ಇದ್ದಾಗ ಸಿದ್ದಣ್ಣನವರಿಗೆ ಮೂಗು ತೂರಿಸುವ ಅಗತ್ಯವಿತ್ತೆ?
" ಜೇಮ್ಸ್ ಚಿತ್ರ ಚೆನ್ನಾಗಿ ನಡೀತಾ ಇದೆ ಒಮ್ಮೆ ಬಂದು ನೋಡಿ ಅಣ್ಣಾ'' ಎಂದು ಸಿದ್ದರಾಮಯ್ಯನವರಿಗೆ ಆಮಂತ್ರಣ ನೀಡಲು ಹೋಗಿದ್ದೆ . ಚಿತ್ರವನ್ನು ತೆಗೆದು ಹಾಕಿ ಎಂದೂ ಯಾರೂ ಒತ್ತಡ ಹೇರಿಲ್ಲ. ಆ ರೀತಿ ನಾನು ಸಿದ್ದರಾಮಯ್ಯನವರ ಮುಂದೆ ಹೇಳಿಯೇ ಇಲ್ಲ. ವಿತರಕರ ಕೆಲವು ಸಮಸ್ಯೆಗಳಿದ್ದವು ಅದನ್ನು ಬಗೆಹರಿಸಿದ್ದೇನೆ ಎಂದು ಖುದ್ದಾಗಿ ಚಿತ್ರದ ನಿರ್ಮಾಪಕ ಕಿಶೋರ್ ಮಾಧ್ಯಮದವರ ಮುಂದೆ ಸ್ಪಷ್ಟಪಡಿಸಿದ್ದಾರೆ.
ವಿಷಯ ಹೀಗಿರುವಾಗ " ದಿ. ಕಾಶ್ಮೀರ್ ಫೈಲ್ಸ್ ಚಿತ್ರ ಪ್ರದರ್ಶನಕ್ಕಾಗಿ ಜೇಮ್ಸ್ ತೆಗೆಯುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಕೆಲವು ಕಡೆ ಬಿಜೆಪಿ ಶಾಸಕರೇ ಜೇಮ್ಸ್ ಚಿತ್ರ ನಡೆಯುತ್ತಿರುವ ಥೇಟರ್ ಗಳಲ್ಲಿ ಶೋ ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದಾರೆ '' ಎಂದು ಖುದ್ದಾಗಿ ನಿರ್ಮಾಕ ಕಿಶೋರ್ ತಮ್ಮ ಬಳಿ ಅಳಲು ತೋಡಿಕೊಂಡರೆಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು ಆಪಾದಿಸಿದ್ದಾರೆ.
ಹಾಗಾದರೆ ಇದರಲ್ಲಿ ಯಾವುದು ಸತ್ಯ? ಯಾರು ಯಾವ ಕಾರಣಕ್ಕೆ ವಿವಾದ ಹುಟ್ಟು ಹಾಕುತ್ತಿದ್ದಾರೆ?
ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯ್ತಿ ನೀಡಿ ಎಂದು ಸಿದ್ದರಾಮಯ್ಯ ಸರಕಾರವನ್ನು ಆಗ್ರಹಿಸಿರುವುದು ಸ್ವಾಗತಾರ್ಹ. ಆದರೆ ಯಾವುದೇ ಕಳಂಕ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಬದುಕಿ ಬಾಳಿ ಕೋಟ್ಯಂತರ ಅಭಿಮಾನಿಗ ಹೃದಯದಲ್ಲಿ ವಿರಾಜಮಾನರಾದ ಎಲ್ಲರ ನೆಚ್ಚಿನ ಅಪ್ಪು ಅವರನ್ನು ರಾಜಕೀಯ ದಾಳವಾಗಿ ಬಳಸಿಕೊಂಡಿರುವುದು ದುರದೃಷ್ಟಕರ.
ಈ ಹಿಂದೆ, ವೀರಶೈವ ಹಾಗೂ ಲಿಂಗಾಯತರ ನಡುವೆ ಸಂಘರ್ಷ ಸೃಷ್ಟಿಸಿ ಕಾಂಗ್ರೆಸ್ ಸಾಕಷ್ಟು ಪೆಟ್ಟು ತಿಂದಿದೆ. ಹಿಜಾಬ್ ತೀರ್ಪು ವಿರೋಧಿಸಿ ನೀಡಿದ್ದ ಬಂದ್ ಕರೆ ಬೆಂಬಲಿಸಿದ್ದೂ ಆಯಿತು. ಇದರ ದುಷ್ಟಪರಿಣಾಮ ಏನಾಗಿದೆ ಗೊತ್ತೆ ಸಿದ್ದಿರಾಮಯ್ಯನವರೆ? ಇಂದು ಹಿಂದೂಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಡ ಮುಸ್ಲಿಂ ವ್ಯಾಪಾರಸ್ಥರು ಬಹಿಷ್ಕಾರ ಎದುರಿಸಬೇಕಾಗಿದೆ.
PublicNext
23/03/2022 06:04 pm