ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿರುವ 'ಅಬ್ಬಾ ಜಾನ್' ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ, ಇಂತಹ ಹೇಳಿಕೆಗಳು "ಆಕ್ರಮಣಕಾರಿಯಾಗಿವೆ" ಎಂದು ಹೇಳಿದ್ದಾರೆ. ಆಂಗ್ಲ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಾಸಿರುದ್ದೀನ್ ಷಾ, "ಯುಪಿ ಸಿಎಂ ಅವರ ಅಬ್ಬಾ ಜಾನ್ ಹೇಳಿಕೆಯು ಅವಮಾನಕಾರಿಯಾಗಿದೆ ಮತ್ತು ಪ್ರತಿಕ್ರಿಯೆಗೆ ಅರ್ಹವಲ್ಲ" ಎಂದು ಹೇಳಿದ್ದಾರೆ.
"ಇದಕ್ಕೆ ಪ್ರತಿಕ್ರಿಯೆ ನೀಡುವಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಈ ಅಬ್ಬಾ ಜಾನ್ ಹೇಳಿಕೆ ಯೋಗಿ ಆದಿತ್ಯನಾಥ್ ಅವರ ದ್ವೇಷಕಾರುವ ಹೇಳಿಕೆಗಳ ಸರಣಿಯ ಒಂದು ಭಾಗವಾಗಿದೆ" ಎಂದು ನಸೀರ್ ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ 2017 ರ ಮೊದಲು 'ಅಬ್ಬಾ ಜಾನ್' ಹೇಳುವವರಿಗೆ ಮಾತ್ರ ರಾಜ್ಯದಲ್ಲಿ ಪಡಿತರ ಸಿಗುತ್ತಿತ್ತು ಎಂದು ಅವರು ಹೇಳುವುದನ್ನು ಕೇಳಬಹುದು. ಭಾನುವಾರ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ತಮ್ಮ ಆಡಳಿತಾವಧಿಯಲ್ಲಿ ಉತ್ತರ ಪ್ರದೇಶದಲ್ಲಿ 'ಓಲೈಕೆಯ ರಾಜಕೀಯ' ಕೊನೆಗೊಂಡಿದೆ ಎಂದೂ ಕೂಡ ಹೇಳಿದ್ದರು.
PublicNext
15/09/2021 07:26 am