ಬೆಳಗಾವಿ : ರಾಜ್ಯದ ವಿವಿಧ ಸಹಕಾರಿ ಬ್ಯಾಂಕ್ ಗಳಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋಟ್ಯಂತರ ರು. ಸಾಲ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ, ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆ, ಸವರಿನ್ ಇಂಡಸ್ಟ್ರೀಸ್ ಸೇರಿದಂತೆ ಬೆಳಗಾವಿ ಡಿಸಿಸಿ ಬ್ಯಾಂಕ್ನಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳು ಡಿಫಾಲ್ಟ್ ಗಳಿವೆ. ರಮೇಶ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಡಿಸಿಸಿ ಬ್ಯಾಂಕ್ನಲ್ಲಿ ಸಾಲ ಪಡೆದಿಲ್ಲ.
ವಿಜಯಪುರ, ಶಿರಸಿ, ತುಮಕೂರು, ಮಂಗಳೂರಿನಲ್ಲಿ ರಮೇಶ ಜಾರಕಿಹೊಳಿ ಸಾಲ ಪಡೆದಿದ್ದು ಎರಡು ವರ್ಷದಿಂದ ಬಡ್ಡಿಯನ್ನೂ ಮರುಪಾವತಿ ಮಾಡಿಲ್ಲ. ಈಗಾಗಲೇ ಹಲವು ಬಾರಿ ಅವರಿಗೆ ನೋಟಿಸ್ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯು ನೂರಾರು ಕೋಟಿ ರು. ಬಾಕಿ ಉಳಿಸಿಕೊಂಡರೂ ಸರ್ಕಾರ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಆರೋಪಿಸಿದ ನಡುವೆಯೇ ಎಸ್.ಟಿ. ಸೋಮಶೇಖರ ಅವರು ಬೆಳಗಾವಿಯಲ್ಲಿ ಸಭೆ ನಡೆಸಿ ಸಾಲ ಮರುಪಾವತಿ, ಸಾಲ ನೀಡಿರುವ ವಿವರ, ಬಡ್ಡಿ ಸೇರಿದಂತೆ ಯಾರು ಯಾರು ಯರು ಸುಸ್ತಿದಾರರಿದ್ದಾರೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
PublicNext
11/05/2022 04:16 pm