ಕೊಲೊಂಬೊ: ಹಿಂದೆದೂ ಕಂಡಿರದ ಭೀಕರ ಆರ್ಥಿಕ ಬಿಕ್ಕಟ್ಟು ಶ್ರೀಲಂಕಾದ ಜನರನ್ನು ಕಾಡುತ್ತಿದೆ. ಆರ್ಥಿಕ ಹೊಡೆತದಿಂದ ಇಡೀ ದೇಶ ನಲುಗಿದೆ. ಧಿಡೀರನೇ ನಿರುದ್ಯೋಗ ಉಲ್ಬಣವಾಗಿದ್ದು ಅಲ್ಲಿನ ಜನ ಊಟಕ್ಕೂ ಗತಿ ಇಲ್ಲದಂತಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ವಲಸೆ ಹೋಗಲು ಜನ ನಿರ್ಧರಿಸಿದ್ದಾರೆ. 1948ರ ಆರ್ಥಿಕ ಬಿಕ್ಕಟ್ಟಿನ ನಂತರ ಅದಕ್ಕಿಂತಲೂ ಮಹಾ ಬಿಕ್ಕಟ್ಟನ್ನು ಶ್ರೀಲಂಕಾ ಎದುರಿಸುತ್ತಿದೆ.
ಶ್ರೀಲಂಕಾವು ಆಮದಿನ ಮೇಲೆಯೇ ಅವಲಂಬಿಸಿದೆ. ದೇಶದ ಆರ್ಥಿಕತೆ ಪತನಗೊಳ್ಳಲು ವಿದೇಶಿ ಕರೆನ್ಸಿಯ ಕೊರತೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಪೆಟ್ರೋಲಿಯಂ, ಆಹಾರ ವಸ್ತು, ಪೇಪರ್, ಸಕ್ಕರೆ, ಕಾಳುಗಳು, ಔಷಧ, ಸಾರಿಗೆ ಸಲಕರಣೆ ಮತ್ತಿತರ ಅಗತ್ಯ ವಸ್ತುಗಳನ್ನು ಬೇರೆ ದೇಶಗಳಿಂದ ಶ್ರೀಲಂಕಾ ಆಮದು ಮಾಡಿಕೊಳ್ಳುತ್ತದೆ. ಈ ಎಲ್ಲ ವಸ್ತುಗಳ ಖರೀದಿಗೆ ಬೇಕಾದ ಹಣದ ಕೊರತೆ ಶ್ರೀಲಂಕಾವನ್ನು ಕಾಡುತ್ತಿದೆ. ಉತ್ತಮ ಆದಾಯ ಕೊಡುತ್ತಿದ್ದ ಶ್ರೀಲಂಕಾದ ಪ್ರವಾಸೋದ್ಯಮದ ಮೇಲೂ ಇದರ ಪರಿಣಮ ತಟ್ಟಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲೂಇಳಿಕೆ
2018ರಲ್ಲಿ ಶ್ರೀಲಂಕಾದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು 1.6 ಶತಕೋಟಿ ಡಾಲರ್ ಇತ್ತು. 2019ರಲ್ಲಿ ಇದು 793 ದಶಲಕ್ಷ ಡಾಲರ್‌ಗೆ, 2020ರಲ್ಲಿ 548 ದಶಲಕ್ಷ ಡಾಲರ್‌ಗೆ ಇಳಿಕೆಯಾಯಿತು. ಎಫ್ ಡಿಐ ಇಳಿಕೆಯ ಬೆನ್ನಲ್ಲೇ, ಮೀಸಲು ನಿಧಿಯಲ್ಲಿದ್ದ ವಿದೇಶಿ ಕರೆನ್ಸಿಯೂ ಇಳಿಮುಖವಾಯಿತು. ಇನ್ನೊಂದೆಡೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ಪಡೆಯಲೂ ಶ್ರೀಲಂಕಾ ನಿರಾಕರಿಸಿದ್ದು, ಅದರ ಆರ್ಥಿಕ ಪತನಕ್ಕೆ ಕೊನೆಯ ಮೊಳೆ ಹೊಡೆದಂತಾಗಿದೆ.
PublicNext
24/03/2022 01:51 pm