ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ಭವಿಷ್ಯ ಅಬಾಧಿತವಾಗಲಿ

ಪಬ್ಲಿಕ್ ನೆಕ್ಸ್ಟ್ ವಿಶೇಷ ಸಂಪಾದಕೀಯ: ಕೇಶವ ನಾಡಕರ್ಣಿ

ಹಿಜಾಬ್ ವಿವಾದ ಈಗ ಹೈಕೋರ್ಟ್ ಅಂಗಳದಿಂದ ಸುಪ್ರಿಂ ಕೋರ್ಟ್ ತಲುಪಿದೆ. ಹೈಕೋರ್ಟ್ ತೀರ್ಪಿನ ನಂತರವೂ ವಿದ್ಯಾರ್ಥಿಗಳು ಹಾಗೂ ಸಮುದಾಯದ ವಿರೋಧ ಮುಂದುವರಿಯುತ್ತಲೇ ಇವೆ.

ಇದರ ನಡುವೆ ಒಂದು ಉತ್ತಮ ಬೆಳವಣಿಗೆ ಕಂಡು ಬಂದಿದೆ.

ಪರೀಕ್ಷೆಗೆ ಗೈರಾದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅವಕಾಶ ನೀಡಬೇಕೋ ಬೇಡವೋ? ಕಾನೂನಿನಲ್ಲಿ ಅವಕಾಶವಿದೆಯೆ ಎಂಬ ವಿಷಯದ ಬಗ್ಗೆ ನಡೆದ ಗಂಭೀರ ಚರ್ಚೆ.

ಉಡುಪಿಯ ಹಿಜಾಬ್ ವಿಷಯದಲ್ಲಿ ಕೇಂದ್ರ ಬಿಂದುವಾಗಿದ್ದ ಶಾಸಕ ರಘುಪತಿ ಭಟ್ ಅವರೆ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಹೈಕೋರ್ಟಿನ ತೀರ್ಪಿಗೆ ಅನುಗುಣವಾಗಿ ತರಗತಿಗಳಲ್ಲಿ ಹಿಜಾಬ್ ಧರಿಸದೆ ಕುಳಿತುಕೊಳ್ಳಲು ಸಿದ್ಧರಾಗಿರುವವರಿಗಾಗಿ ಮರು ಪರೀಕ್ಷೆಗಳನ್ನು ನಡೆಸುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.

ಉಡುಪಿ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್ ಅವರೆ ಈ ವಿಷಯ ಪ್ರಸ್ತಾಪಿಸಿರುವುದು ಗಮನಾರ್ಹ.

“ ಮರು ಪರೀಕ್ಷೆ ನಡೆಸಲು ಸಾಂವಿಧಾನಿಕ ಕಟ್ಟಳೆಗಳಿವೆ. ವಿದ್ಯಾರ್ಥಿಗಳು ಕೇಳಿದಾಗ ಪರೀಕ್ಷೆ ನಡೆಸುವುದು ಪ್ರಶ್ನೆ ಪತ್ರಿಕೆ ರೂಪಿಸುವುದು ಸುಲಭವಲ್ಲ. ಹೀಗಾಗಿ ಇದು ಅಸಾಧ್ಯ '' ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನಸಭೆಗೆ ಉತ್ತರಿಸಿದ್ದಾರೆ.

ಕೋರ್ಟ್ ಸ್ಪಷ್ಟ ತೀರ್ಪುನ್ನು ಎಲ್ಲರೂ ಗೌರವಿಸಲೇ ಬೇಕು ಅದರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಮಕ್ಕಳ ಭವಿಷ್ಯದ ಪ್ರಶ್ನೆಯೂ ಅಡಗಿದೆಯಲ್ಲವೆ?

ತಿಳಿದೋ ತಿಳಿಯದೆಯೋ, ಧರ್ಮಾಚರಣೆ ಕಟ್ಟುಪಾಡಿಗೊಳಗಾಗಿಯೋ ಅಥವಾ ಯಾರದೋ ಪ್ರಭಾವಕ್ಕೆ ಒಳಗಾಗಿಯೋ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆ ತಪ್ಪಿಸಿಕೊಳ್ಳಬೇಕಾಯಿತು. ಹೋಳಿ ನಂತರ ವಿಚಾರಣೆ ನಡೆಸುವುದಾಗಿ ಸುಪ್ರಿಂ ಕೋರ್ಟ್ ಹೇಳಿದೆ. ಹಾಗಾದರೆ ಅಲ್ಲಿ ಅಂತಿಮ ತೀರ್ಪು ಬರುವವರೆಗೆ ಈ ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರಬೇಕೆ?

ಸರಕಾರ ಮನಸ್ಸು ಮಾಡಿದರೆ ಸುಗ್ರಿವಾಜ್ಞೆಯೊಂದನ್ನು ತಂದು ಅಥವಾ ತಿದ್ದುಪಡಿ ಮಸೂದೆಯೊಂದನ್ನು ಮಂಡಿಸಿ ವಂಚಿತ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬಹುದಲ್ಲವೆ? ಇದು ಅಷ್ಟು ಸುಲಭದ ಮಾತಲ್ಲ ಆದರೂ ಶಾಸನ ಸಭೆ ಒಮ್ಮತ ನಿರ್ಣಯ ಕೈಗೊಂಡರೆ ಅಸಾಧ್ಯವೇನೂ ಇಲ್ಲ.

KPSC ಆಯ್ಕೆ ಸಮಿತಿ ನಡೆಸಿದ ಅವ್ಯವಹಾರದ ಹಿನ್ನೆಲೆಯಲ್ಲಿ 2011 ರ ಪರೀಕ್ಷೆಯ 362 ಗೆಜೆಟೆಡ್ ಪ್ರೊಬೇಷನರ್ ಗಳ ಆಯ್ಕೆಯನ್ನು 2013 ರಲ್ಲಿ ಕೋರ್ಟ್ ಅಸಿಂಧುಗೊಳಿಸಿತ್ತು.

ಇದು ಅಸಾಧ್ಯವೆಂದು ಹೇಳುವ ಕಾನೂನು ಸಚಿವ ಮಾಧುಸ್ವಾಮಿ ಅವರೆ, ಅದೇ 362 ಗೆಜೆಟೆಡ್ ಪ್ರೊಬೇಷನರ್ ಗಳ ನೇಮಕಾತಿ ಸಿಂಧುಗೊಳಿಸಲು ಈಚೆಗೆ ವಿಧಾನಸಭೆಯಲ್ಲಿ ಗೆಜೆಟೆಡ್ ಪ್ರೊಬೇಷನರ್ಸ -2022 ಮಸೂದೆಯೊಂದನ್ನು ಮಂಡಿಸಿ ಪಾಸು ಮಾಡಿ ಕೋರ್ಟಿಗೆ ವರದಿ ಸಲ್ಲಿಸಿದ್ದರಲ್ಲವೆ? ಇದೆ ಮಸೂದೆಗೆ ಪಕ್ಷ ಭೇದ ಮರೆತು ಎಲ್ಲರೂ ಬೆಂಬಲಿಸಿದ್ದಿರಲ್ಲವೆ?

ಇಂತಹ ವಿಶೇಷ ಸಂದರ್ಭಗಳಲ್ಲಿ ಮರುಪರೀಕ್ಷೆ ನಿರ್ಣಯ ಕೈಗೊಳ್ಳಲು ಸಾಂವಿಧಾನಿಕ ಕಟ್ಟಳೆ ಅಡ್ಡಿ ಬರುವುದಿಲ್ಲ. ಈ ಹಿಂದೆ ಪ್ರತಿಭಟನೆ ಅಥವಾ ಹಟಾತ್ ಬಂದ್ ನಡೆದಾಗ ಅನೇಕ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ವಂಚಿತರಾಗಿದ್ದರು. ಆಗ ಸರಕಾರ (ಯೂನಿವರ್ಸಿಟಿ ಸಿಂಡಿಕೇಟ್) ಕೇವಲ ಒಂದು executive ಆರ್ಡರ್ ಹೊರಡಿಸಿ ಮರುಪರೀಕ್ಷೆಗೆ ಅನುವು ಮಾಡಿಕೊಟ್ಟ ಅನೇಕ ಉದಾಹರಣೆಗಳಿವೆ.

ಕೋರ್ಟು ಒಂದು ವಿವಾದದ ಕುರಿತು ತೀರ್ಪು ನೀಡಬಹುದು ಹೊರತು ಮರು ಪರೀಕ್ಷೆ ನಡೆಸುವಂತೆ ಸರಕಾರಕ್ಕೆ ನಿರ್ದೇನ ನೀಡುವುದಿಲ್ಲ. ಒಂದು ವೇಳೆ ಮರು ಪರೀಕ್ಷೆ ನಡೆಸಿದರೂ ಅದು ನ್ಯಾಯಾಂಗ ನಿಂದನೆ ಆಗುವುದಿಲ್ಲ.

ಈ ಎಲ್ಲ ಆಂಶಗಳನ್ನು ಪರಿಗಣಿಸಿ ಇಲ್ಲೂ ಏಕೆ ಒಂದು ನಿರ್ಣಯ ಕೈಗೊಳ್ಳಬಾರದು? ಪಕ್ಷ ರಾಜಕಾರಣ ಬದಿಗಿಟ್ಟು ವಿದ್ಯಾರ್ಥಿನಿಯರ ಭವಿಷ್ಯ ದೃಷ್ಟಿಯಿಂದ ಯೋಚಿಸಬೇಕಲ್ಲವೆ? ನ್ಯಾಯಾಂಗಕ್ಕೆ ಮನವರಿಕೆ ಮಾಡಿಕೊಡುವ ಸಾಮರ್ಥ್ಯ ಶಾಸಕಾಂಗಕ್ಕಿದೆ. ಆದರೆ ಇಚ್ಛಾಶಕ್ತಿ ಬೇಕಷ್ಟೆ.

Edited By : Nagaraj Tulugeri
PublicNext

PublicNext

18/03/2022 03:38 pm

Cinque Terre

49.78 K

Cinque Terre

21

ಸಂಬಂಧಿತ ಸುದ್ದಿ