ಚಾಮರಾಜನಗರ: ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರ್ತಾಳೆ ಅನ್ನೋ ಮಾತಿದೆ. ಆದ್ರೆ ಆ ಮಾತು ಇಲ್ಲಿ ಉಲ್ಟಾ ಹೊಡೆದಿದೆ..!
ತಂದಾನಾ ತಾನನ- ತಂದನಾನಾ ತಾನನ ವೋಟು ಹಾಕಿ ಗೆಲ್ಲಿಸಿ, ಗ್ರಾಮದ ಅಭಿವೃದ್ಧಿ ನೋಡಿ.. ಎಂದು ಕೊರಳಲ್ಲಿ ನಾಮಪತ್ರ ಹಿಡಿದು ಕೈಯಲ್ಲಿ ಕಂಸಾಳೆ ಬಾರಿಸುತ್ತಾ ಪತ್ನಿ ಪರ ಮತಯಾಚಿಸುತ್ತಿರುವ ವ್ಯಕ್ತಿ. ಈತ ಹೀಗೆಲ್ಲ ಮಾಡುತ್ತಿರುವುದು ತನ್ನ ಹೆಂಡತಿಗಾಗಿ. ಈ ವ್ಯಕ್ತಿ ಹನೂರು ತಾಲೂಕಿನ ಸೂಳೇರಿಪಾಳ್ಯ ಗ್ರಾಪಂ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ 5 ನೇ ವಾರ್ಡ್ನಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಜಯಮ್ಮ ಅವರ ಪತಿ ಬ್ಯಾಂಗೇಗೌಡ. ಈ ರೀತಿ ಮಾದಪ್ಪನ ಭಕ್ತನಾಗಿ ವಿನೂತನ ಶೈಲಿಯ ಪ್ರಚಾರಕ್ಕೆ ಇಳಿದು ಮತದಾರರನ್ನು ಸೆಳೆಯುತ್ತಿದ್ದಾರೆ.
ಜೋಳಿಗೆ ತುಂಬಾ ಕರಪತ್ರಗಳನ್ನು ತುಂಬಿಕೊಂಡು ಕೊರಳಿಗೂ ಕರಪತ್ರ ಅಂಟಿಸಿಕೊಂಡು ‘ಮಾದಪ್ಪನಿಗೆ ಅಕ್ಕಿ ಕೊಡಿ – ವೋಟು ನನ್ನ ಪತ್ನಿಗೆ ಕೊಡಿ’ ಎಂದು ಮನೆಮನೆ, ಬೀದಿ ಬೀದಿ ತಿರುಗುತ್ತಿದ್ದಾರೆ. ಸಿಲಿಂಡರ್ ಗುರುತು ಮರೆಯದಿರಿ ಎಂದು ಕಂಸಾಳೆ ಬಾರಿಸುತ್ತಾ, ಗ್ರಾಮಾಭಿವೃದ್ದಿಯನ್ನು ಮರೆಯುವುದಿಲ್ಲ ಎಂದು ವಾಗ್ದಾನ ನೀಡುವ ಮೂಲಕ ವಿನೂತನ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಇವರ ಹೆಂಡತಿ ಸೋಲು ಕಂಡಿದ್ದರಂತೆ. ಹೀಗಾಗಿ ಈ ಬಾರಿ ಹೇಗಾದರೂ ಗೆಲ್ಲಬೇಕೆಂಬ ಪಣ ತೊಟ್ಟಿರುವ ದಂಪತಿ ಈ ಮಾರ್ಗ ಕಂಡುಕೊಂಡಿದ್ದಾರೆ.
PublicNext
24/12/2020 12:56 pm