ಬೆಂಗಳೂರು: ಜೆಡಿಎಸ್-ಬಿಜೆಪಿ ವಿಲೀನ ಸತ್ಯಕ್ಕೆ ದೂರವಾದ ವಿಚಾರ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನ ಪರಿಷತ್ ಸಭಾಪತಿಗಳ ವಿಚಾರದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದರೆ ಯಾವುದೇ ಅವರ ಶಾಸಕರು ಭಾರತೀಯ ಜನತಾ ಪಕ್ಷಕ್ಕೆ ಬರುವುದಾಗಲೀ ಅಥವಾ ಜೆಡಿಎಸ್ ಪಕ್ಷವನ್ನು ಭಾರತೀಯ ಜನತಾ ಪಕ್ಷದಲ್ಲಿ ವಿಲೀನಗೊಳಿಸುವಂತಹ ಗೊಂದಲದ ವರದಿಗಳು ಶುದ್ಧ ಸುಳ್ಳು ಎಂದು ಹೇಳಿದರು.
ಕೇವಲ ಪರಿಷತ್ ಸಭಾಪತಿ ವಿಚಾರದಲ್ಲಿ ಮಾತ್ರ ನಮಗೆ ಸಹಕಾರ ನೀಡುತ್ತಿದ್ದಾರೆಯೇ ವಿನಃ ಮತ್ತೇನೂ ಇಲ್ಲ. ಗೋಹತ್ಯೆ ನಿಷೇಧದ ಬಗ್ಗೆ ನಮ್ಮ ಬೆಂಬಲವಿಲ್ಲ ಎಂದು ಸಹ ಕುಮಾರಸ್ವಾಮಿ ಸ್ಪಷ್ಟವಾಗಿ ಹೇಳಿದ್ದರಿಂದ ನಾವು ಸುಗ್ರೀವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿಗೆ ತರುತ್ತಿದ್ದೇವೆ. ವಿಧಾನಸಭೆಗೆ ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಈಗ ಮಾಧ್ಯಮಗಳಲ್ಲಿ ಬರುತ್ತಿರುವ ಬಿಜೆಪಿ ಜತೆ ಜೆಡಿಎಸ್ ವಿಲೀನ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ ಎಂದು ಸ್ಪಷ್ಟನೆ ನೀಡಿದರು.
PublicNext
20/12/2020 10:41 pm