ತುಮಕೂರು: ಗ್ರಾಪಂ ಚುನಾವಣೆ ಅಖಾಡದಲ್ಲಿರುವ ಹೆಬೂರು ಗ್ರಾಪಂಗೆ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಗಂಗಮ್ಮ ಎಚ್. ಎಂಬವರ ಕರಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಚುನಾವಣೆಯ ಮೊದಲ ಹಂತವಾದ ಡಿಸೆಂಬರ್ 22 ರಂದು ನಡೆಯಲಿರುವ ಚುನಾವಣೆಯಲ್ಲಿ ಹೆಬ್ಬೂರು ಗ್ರಾಪಂನ 7 ನೇ ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿರುವ ಗಂಗಮ್ಮ ತಮ್ಮ ಚುನಾವಣೆ ಪ್ರಣಾಳಿಕೆ ಮೂಲಕ ಗಮನ ಸೆಳೆದಿದ್ದಾರೆ.
ಇಷ್ಟಕ್ಕೂ ಈ ಪ್ರಣಾಳಿಕೆ ಚರ್ಚೆಗೆ ಗ್ರಾಸವಾಗಿರುವುದು ಏಕೆ ಎಂದರೆ ನೀವು ಬೆಚ್ಚಿ ಬೀಳ್ತೀರಿ.
ಅದೇನೆಂದರೆ, ಎಲ್ಲ ಅಭ್ಯರ್ಥಿಗಳು ಗೆದ್ದರೆ ಏನೇನು ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರೆ, ಗಂಗಮ್ಮ ಅವರು, ಸೋತರೂ ಏನೆಲ್ಲ ಕೆಲಸ ಮಾಡುವುದಾಗಿ ಹೇಳಿದ್ದಾರೆ!
ತಾನು ಸೋತರೆ ''ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುವುದು, ಸರಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ ಮೈತ್ರಿ, ಮನಸ್ವಿನಿ, ವಿಧವಾ ವೇತನ ಹಣ ನಿಲ್ಲಿಸುವುದು, ಸರ್ವೇ ನಂ.86ರಲ್ಲಿ ಹಳೆ ದಾಖಲೆಯಂತೆ ಸ್ಮಶಾನ ಮಾಡಿಸುವುದು, ಕಲ್ಕೆರೆ ಗ್ರಾಮದ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು ಹೋರಾಟ ಮಾಡುವುದು'' ಎಂದಿದ್ದಾರೆ.
ಜೊತೆಗೆ ತನ್ನ ಆಶ್ವಾಸನೆಗೆ ಅವರು ಸಾಕ್ಷಿಯಾಗಿ, ಅಕ್ರಮವಾಗಿ ಕಾನೂನಿಗೆ ವಿರುದ್ಧವಾಗಿದ್ದ 6 ಮನೆಗಳ ಬಿಲ್ ನಿಲ್ಲಿಸಿರುವುದನ್ನು ಉಲ್ಲೇಖಿಸಿದ್ದಾರೆ. ಪ್ರಣಾಳಿಕೆಯ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
PublicNext
20/12/2020 01:26 pm