ಮಡಿಕೇರಿ : ಗ್ರಾಮ ಪಂಚಾಯತ್ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಈ ಬಾರಿಯ ಚುನಾವಣೆಯಲ್ಲಿ ಯುವಕರು ಸೇರಿ ಮುದುಕರು ನಾಮಪತ್ರ ಸಲ್ಲಿಸಿ ಚುನಾವಣಾ ಕಣದಲ್ಲಿ ಕಸರತ್ತು ನಡೆಸಿದ್ದಾರೆ.
ಇದರ ಮಧ್ಯೆ ಪ್ರವಾಸಿ ಜಿಲ್ಲೆ ಕೊಡಗಿನ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಪಿ.ಬೋಪಣ್ಣ ಅವರು ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಕೊಡಗಿನ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ವಿದ್ಯಮಾನ ನಡೆದಿದೆ ಎನ್ನಲಾಗಿದೆ.
ಕಳೆದ ಎರಡು ಅವಧಿಗೆ 10 ವರ್ಷಗಳ ಕಾಲ ಇವರು ಪಾಲಿಬೆಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹಿಂದಿನಂತೆ ಈ ಬಾರಿಯೂ ಚುನಾವಣೆಗೆ ನಿಲ್ಲುವ ತಯಾರಿ ನಡೆಸುತ್ತಿರುವಾಗ ಇವರ ವಿರುದ್ಧದ ದಲಿತ ದೌರ್ಜನ್ಯ ಪ್ರಕರಣದಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.
ಈ ಪ್ರಕರಣದಲ್ಲಿ ಜಾಮೀನಿಗಾಗಿ ಪ್ರಯತ್ನಿಸಿದರೂ ಜಾಮೀನು ಇನ್ನೂ ಸಿಕ್ಕಿಲ್ಲ.
ಇದೀಗ ನ್ಯಾಯಾಲಯದಿಂದ ಒಪ್ಪಿಗೆ ಪಡೆದು ಜೈಲಿನಿಂದಲೇ ಗ್ರಾ.ಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ.
ಸ್ಥಳೀಯ ಜಿಲ್ಲಾ ಪಂಚಾಯತಿ ಸದಸ್ಯ ಧರ್ಮಜ ಉತ್ತಪ್ಪ ನಾಮಪತ್ರ ಸಲ್ಲಿಕೆ ಮಾಡುವುದಕ್ಕೆ ಅಗತ್ಯವಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು, ""ಪಾಲಿಬೆಟ್ಟ್ ಗ್ರಾಮ ಪಂಚಾಯತಿಯಲ್ಲಿ ಸಾಕಷ್ಟು ಅಭಿವೃದ್ಧಿಗೆ ಕೆಲಸ ಮಾಡಿರುವ ಬೋಪಣ್ಣ ಅವರು ರಾಷ್ಟ್ರ ಮಟ್ಟದಲ್ಲಿ ಗ್ರಾಮ ಪಂಚಾಯತಿಗೆ ಪ್ರಶಸ್ತಿ ಬರಲು ಶ್ರಮಿಸಿದ್ದರು'' ಎಂದು ಹೇಳಿದ್ದಾರೆ.
PublicNext
17/12/2020 06:36 pm