ಬೆಂಗಳೂರು: ಸಾರಿಗೆ ನೌಕರರ ಹೋರಾಟಕ್ಕೆ ನಾಯಕತ್ವ ಕೊಟ್ಟಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಗರಂ ಆಗಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋಡಿಹಳ್ಳಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಶಾಸಕರು, ನೀನು ಯಾರಯ್ಯ ನನ್ನ ಬಗ್ಗೆ ಮಾತಾಡೋದಕ್ಕೆ. ನೀನು ಅಕ್ರಮ ಆಸ್ತಿ ಮಾಡಿದ್ದೀಯಾ, ಕೋಡಿಹಳ್ಳಿಯಲ್ಲಿದ್ದಾಗ ಎಷ್ಟಿತ್ತು ಆಸ್ತಿ?, ಐಷಾರಾಮಿ ಜೀವನ ಮಾಡ್ತಿದ್ದೀಯಾ, ಎಷ್ಟು ಐಷಾರಾಮಿ ಕಾರು ಇವೆ?. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್. ನನ್ನಲ್ಲಿ ಅವನ ಮನೆ, ಬಂಗಲೆ ಫೋಟೋ ಇದೆ. ಅವನ ಬಳಿ ಐಷಾರಾಮಿ ಕಾರು ಇವೆ. ಎರಡೂವರೆ ಎಕರೆ ಇದ್ದ ಜಮೀನು ಈಗೆಷ್ಟು ಆಯ್ತು ಎಂದು ಪ್ರಶ್ನೆಗಳ ಸುರಿಮಳೆಗೈದ್ರು.
ಕೋಡಿಹಳ್ಳಿ ವಿಭಿನ್ನ ಪಾತ್ರಗಳನ್ನು ಮಾಡ್ತಾನೆ. ಹಸಿರು ಟವೆಲ್ ಹಾಕಿದ ಇವನಿಗೂ ಸಾರಿಗೆ ನೌಕರರ ಹೋರಾಟಕ್ಕೂ ಏನ್ ಸಂಬಂಧ? ಉಳುಮೆ ಮಾಡಿ ಎಷ್ಟು ವರ್ಷ ಆಗಿದೆ? ಹಳ್ಳಿ ಬಿಟ್ಟು ಪಟ್ಟಣದಲ್ಲೇ ಯಾಕೆ ವಾಸ ಮಾಡ್ತಿದ್ದಾನೆ. ನನ್ನ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡಲು ಇವನಾರು? ಬರೀ ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತಗೊಳ್ತಾರೆ. ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರೋಲ್ಲ ಎಂದ ರೇಣುಕಾಚಾರ್ಯ, ಕೋಡಿಹಳ್ಳಿ ಮೇಲೆ ಆಕ್ರೋಶದ ಕೋಡಿ ಹರಿಸಿದರು.
PublicNext
16/12/2020 04:04 pm