ನವದೆಹಲಿ: ಡೆಡ್ಲಿ ಸೋಂಕು ಕೊರೊನಾ ಹಿನ್ನೆಲೆಯಲ್ಲಿ ಎರಡನೇ ಅಲೆಯ ಆತಂಕದಿಂದಾಗಿ ಈ ಬಾರಿ ಲೋಕಸಭೆಯ ಚಳಿಗಾಲದ ಅಧಿವೇಶನ ನಡೆಸುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ ಎಂದು ವರದಿ ಹೇಳಿದೆ.
ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲು ಬಹುತೇಕ ಪಕ್ಷಗಳು ಸಹಮತ ವ್ಯಕ್ತಪಡಿಸಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದು, ಜನವರಿಯಲ್ಲಿ ಬಜೆಟ್ ಕಲಾಪ ನಡೆಯಲಿದೆ ಎಂದು ಹೇಳಿದರು.
ಚಳಿಗಾಲದ ಅಧಿವೇಶನ ಕರೆಯಬೇಕೆಂಬ ಲೋಕಸಭಾ ಮುಖಂಡ ಅಧೀರ್ ರಂಜನ್ ಬೇಡಿಕೆಗೆ ಉತ್ತರ ನೀಡಿರುವ ಜೋಶಿ ಅವರು, ಈ ಬಗ್ಗೆ ಎಲ್ಲಾ ಪಕ್ಷಗಳ ಮುಖಂಡರ ಜತೆ ಚರ್ಚೆ ನಡೆಸಿದ್ದು, ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಅಧಿವೇಶನ ನಡೆಸುವುದು ಬೇಡ ಎಂಬ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿರುವುದಾಗಿ ತಿಳಿಸಿದ್ದಾರೆ.
ಸಂವಿಧಾನದ ಪ್ರಕಾರ, ಆರು ತಿಂಗಳೊಳಗೆ ಕಲಾಪ ನಡೆಸಬೇಕು ಎಂದಿದೆ.
ಈ ನಿಟ್ಟಿನಲ್ಲಿ ಜನವರಿ ಕೊನೆಯ ವಾರದಲ್ಲಿ ಬಜೆಟ್ ಅಧಿವೇಶನ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು.
ಚೀನಾ ಗಡಿ ವಿವಾದ, ಆರ್ಥಿಕ ಸ್ಥಿತಿ ಹಾಗೂ ರೈತರ ಪ್ರತಿಭಟನೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಚರ್ಚಿಸಬೇಕಾಗಿದ್ದು, ಕೂಡಲೇ ಮುಂಜಾಗ್ರತಾ ಕ್ರಮದೊಂದಿಗೆ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
PublicNext
15/12/2020 11:26 am