ನವದೆಹಲಿ: ಕಾಂಗ್ರೆಸ್ ನಾಯಕತ್ವದ ವಿರುದ್ಧ 20ಕ್ಕೂ ಹೆಚ್ಚು ನಾಯಕರು ದನಿ ಎತ್ತಿದ ಬೆನ್ನಲ್ಲೇ, 2014ರಲ್ಲಿ ಯುಪಿಎ ಸರ್ಕಾರ ಅಧಿಕಾರ ಕಳೆದುಕೊಳ್ಳಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಅವರೇ ಕಾರಣ ಎಂದು ಮಾಜಿ ರಾಷ್ಟ್ರಪತಿ ದಿವಂಗತ ಪ್ರಣಬ್ ಮುಖರ್ಜಿ ಅವರು ಬರೆದಿರುವುದು ಸಂಚಲನಕ್ಕೆ ಕಾರಣವಾಗಿದೆ.
ಕಳೆದ ಆಗಸ್ಟ್‌ನಲ್ಲಿ ನಿಧನರಾದ ಪ್ರಣಬ್ ಅವರು ‘ದ ಪ್ರೆಸೆಡೆನ್ಷಿಯಲ್ ಇಯರ್ಸ್’ ಎಂಬ ಪುಸ್ತಕ ಬರೆದಿದ್ದಾರೆ. ಅದು ಜನವರಿಯಲ್ಲಿ ಬಿಡುಗಡೆಯಾಗಲಿದ್ದು, ಅದರಲ್ಲಿ ಅಡಕವಾಗಿರುವ ಅಂಶಗಳು ಈಗ ಭಾರಿ ಚರ್ಚೆಗೆ ಕಾರಣವಾಗಿವೆ.
2004ರಲ್ಲಿ ನಾನೇನಾದರೂ ಒಂದು ವೇಳೆ ಪ್ರಧಾನಿಯಾಗಿದ್ದರೆ, 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸುತ್ತಿರಲಿಲ್ಲ ಎಂದು ಕೆಲವು ಕಾಂಗ್ರೆಸ್ಸಿಗರು ಹೇಳುತ್ತಾರೆ. ಆದರೆ ಇದಕ್ಕೆ ನನ್ನ ಸಹಮತ ಇಲ್ಲವಾದರೂ, ನಾನು ರಾಷ್ಟ್ರಪತಿಯಾದ ನಂತರ ಪಕ್ಷದ ನಾಯಕತ್ವ ರಾಜಕೀಯ ಲಕ್ಷ್ಯವನ್ನು ಕಳೆದುಕೊಂಡಿತು ಎಂದು ನಾನು ಭಾವಿಸಿದ್ದೇನೆ. ಪಕ್ಷದ ವ್ಯವಹಾರಗಳನ್ನು ನಿರ್ವಹಿಸಲು ಸೋನಿಯಾ ಗಾಂಧಿ ಅವರಿಂದ ಆಗಲಿಲ್ಲ. ಮನಮೋಹನ ಸಿಂಗ್ ಅವರು ಸದನದಿಂದ ದೀರ್ಘಾವಧಿಗೆ ದೂರ ಉಳಿದರು. ಇದರಿಂದ ಸಂಸದರೊಂದಿಗಿನ ವೈಯಕ್ತಿಕ ಸಂಪರ್ಕ ಕಡಿತಗೊಂಡಿತು ಎಂದು ಪುಸ್ತಕದಲ್ಲಿ ಪ್ರಣಬ್ ಮುಖರ್ಜಿ ಬರೆದಿದ್ದಾರೆ.
PublicNext
12/12/2020 03:13 pm