ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

UPA ಅಧ್ಯಕ್ಷ ಸ್ಥಾನದಿಂದ ಸೋನಿಯಾ ಔಟ್ : ಪವಾರ್ ಗೆ ಪಾವರ್

ಪಬ್ಲಿಕ್ ನೆಕ್ಸ್ಟ್ ವಿಶ್ಲೇಷಣೆ : ಕೇಶವ ನಾಡಕರ್ಣಿ

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಗೆ ಸಮರ್ಥ ಎದಿರೇಟು ನೀಡುವಲ್ಲಿ ಸೋತು ಹೈರಾಣಾಗಿರುವ ಕಾಂಗ್ರೆಸ್ ಈಗ, UPA ಅಧ್ಯಕ್ಷ ಸ್ಥಾನ ತ್ಯಜಿಸಬೇಕಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಆಧಾರ ಸ್ತಂಭವಾಗಿದ್ದ ಹಾಲಿ NCP ಅಧ್ಯಕ್ಷ ಶರದ್ ಪವಾರ್ ಅವರಿಗೆ ಯುಪಿಎ ಸಾರಥ್ಯ ವಹಿಸುವ ಪ್ರಕ್ರಿಯೆ ಆರಂಭವಾಗಿದೆ. ಅನಾರೋಗ್ಯದ ಕಾರಣ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಯುಪಿಎ ಸಾರಥ್ಯದಿಂದ ಹಿಂದಕ್ಕೆ ಸರಿಯುತ್ತಿರುವುದು ಹಾಗೂ ಪುತ್ರ ರಾಹುಲ್ ಗಾಂಧಿ ನಿರಾಕರಿಸುತ್ತಿರುವುದು.

ಆದರೆ ನಿಜವಾದ ಕಾರಣಗಳೇ ಬೇರೆ. ಸಾಲು ಸಾಲು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ತನ್ನ ಹಿರಿಯ ತಲೆಗಳನ್ನೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಪಿಲ್ ಸಿಬ್ಬಲ್ ಅವರಂತ ಹಿರಿಯ ನಾಯಕರೆ ರಾಹುಲ್ ನೇತೃತ್ವವನ್ನು ಟೀಕಿಸ ತೊಡಗಿದ್ದರಿಂದ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ ಎಂಬುದು ಸಾಬೀತಾಗಿದೆ.

ಒಂದು ವೇಳೆ 2024 ಲೋಕಸಭೆ ಚುನಾವಣೆ ಹಾಗೂ ಮುಂಬರುವ ಕೆಲವು ರಾಜ್ಯಗಳ ವಿಧಾನ ಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಟಕ್ಕರ್ ಕೊಡಬೇಕೆಂದರೆ ಕಾಂಗ್ರೆಸ್ ನೆರಳಿನಿಂದ ಹೊರಬರಲೇ ಬೇಕು. ಕಾಂಗ್ರೆಸ್ ಸಖ್ಯದಲ್ಲಿರುವವರೆಗೆ ತಮಗೆ ಉಳಿಗಾಲವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವ ಯುಪಿಎ ಅಂಗಪಕ್ಷಗಳು ಎನ್ ಸಿಪಿ ನಾಯಕ ಹಾಗೂ ಅತ್ಯಂತ ಹಿರಿಯ ರಾಜಕಾರಣಿ ಶರದ್ ಪವಾರ್ ಅವರನ್ನು ಯುಪಿಎ ಅಧ್ಯಕ್ಷ ಗಾದಿಗೆ ತರಲು ಮುಂದಾಗಿರುವುದು ಬಹಿರಂಗ ಸತ್ಯ.

ಒಂದು ಕಾಲಕ್ಕೆ ಬದ್ಧ ವೈರಿಯಾಗಿದ್ದ ಶಿವಸೇನೆ ಸಹ ಶರದ್ ಪವಾರ್ ಯುಪಿಎ ಅಧ್ಯಕ್ಷರಾದರೆ ತುಂಬಾ ಸಂತೋಷವೆಂದು ಹೇಳಿದೆ.

ಒಂದು ವೇಳೆ ಈ ಬೆಳವಣಿಗೆಯಾದಲ್ಲಿ ದೇಶದ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ ಬಿಜೆಪಿ ಹೊರತಾದ ವಿರೋಧ ಪಕ್ಷಗಳ ಒಕ್ಕೂಟಕ್ಕೆ ಕಾಂಗ್ರೆಸ್ಸೇತರ ವ್ಯಕ್ತಿ ಅಧ್ಯಕ್ಷ ಗಾದಿಗೇರಿದಂತಾಗುತ್ತದೆ. ಇಷ್ಟೇ ಅಲ್ಲ ಕಾಂಗ್ರೆಸ್ ಪಕ್ಷ ಮುಂದೊಂದು ದಿನ ನಗಣ್ಯವಾದರೂ ಆಶ್ಚರ್ಯವಿಲ್ಲ.

ಏತನ್ಮಧ್ಯ ಅಂಗ್ಲ ಪತ್ರಿಕೆಯೊಂದು " ಈಗ ನಡೆದಿರುವ ರೈತರ ಪ್ರತಿಭಟನೆ ಹಾಗೂ ಕೋವಿಡ್ ಕಾರಣದಿಂದ ಸೋನಿಯಾ ಗಾಂಧಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳಬಾರದು " ಎಂಬ ಪುಕ್ಕಟೆ ಸಲಹೆ ಮಾಡಿ ಲೇಖನ ಪ್ರಕಟಿಸಿದೆ.

ನೋಡಿ ಇವರ ಭಟ್ಟಂಗಿತನ. ಸೋನಿಯಾ ಗಾಂಧಿ ಜನ್ಮದಿನಾರಣೆಗೂ ದೇಶ ವ್ಯಾಪಿ ರೈತರ ಸಮಸ್ಯೆಗಳಿಗೇನು ಸಂಬಂಧ. ಇವರೇನು ರಾಷ್ಟ್ರದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಜಾಗೀರು ಹೊತ್ತಿದ್ದಾರೆಯೇ? ಒಂದು ದಿನದ ಬರ್ಥಡೆ ಪಾರ್ಟಿ ರದ್ದುಪಡಿಸಿದರೆ ರೈತರ ಬೇಡಿಕೆ ಈಡೇರುತ್ತವೆಯೆ?

ಇಂದು ಕಾಂಗ್ರೆಸ್ ಕೇವಲ ಗಾಂಧಿ..ಗಾಂಧಿ..ಗಾಂಧಿ ಹೆಸರಿನಿಂದಲೇ ಉಸಿರಾಡುತ್ತಿದೆ. ದಿ. ಪ್ರಧಾನಿ ಇಂದಿರಾಗಾಂಧಿ ಪುತ್ರ ಆಗಿದ್ದಕ್ಕೆ ರಾಜೀವ ಗಾಂಧಿ, ನಂತರ ಅವರ ಪತ್ನಿಯಾಗಿದ್ದಕ್ಕೆ ಸೋನಿಯಾ ಗಾಂಧಿ ಈಗ ಸೋನಿಯಾ ಪುತ್ರ ಆಗಿದ್ದಕ್ಕೆ ರಾಹುಲ್‌. ಇವರಿಗೆ ವಂಶಪಾರಂಪರ್ಯ ಬಿಟ್ಟರೆ ಇವರಿಗೆ ಸ್ವಯಂ ವರ್ಚಸ್ಸು ಎಂಬುದೇ ಇಲ್ಲ. ಉತ್ತರ ಪ್ರದೇಶದಲ್ಲಿ ಈ ಹಿಂದೆ ಕಾಂಗ್ರೆಸ್ ಸಖ್ಯ ಬೆಳೆಸಿದ್ದ ಸಮಾಜವಾದಿ ಪಾರ್ಟಿ ನೆಲ ಕಚ್ಚಬೇಕಾಯಿತು. ಗುಜರಾತಿನಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿತ್ತು.

ಕಾಂಗ್ರೆಸ್ಸಿನಿಂದ ದೂರವುಳಿದರೆ ತಮಗೆ ಉಳಿವು ಎಂದು ಪ್ರತಿಪಕ್ಷಗಳು ಮನಗಂಡಿರುವುದಕ್ಕೆ ಇತ್ತೀಚಿನ ಬಿಹಾರ ಚುನಾವಣೆ ಸಾಕ್ಷಿ. ಅಲ್ಲಿ ಲಾಲು ಪುತ್ರರು ಅಧಿಕಾರಕ್ಕೆ ಬಾರದಿರಬಹುದು ಆದರೆ ನಿತೀಶ್ ಕುಮಾರ್ ಗೆ ಟಕ್ಕರ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಕಾರಣ ಕಾಂಗ್ರೆಸ್ಸಿನೊಂದಿಗೆ ನೇರ ಹೊಂದಾಣಿಕೆ ಮಾಡಿಕೊಳ್ಳದಿರುವುದು.

ಇದೇ ಪ್ರಯೋಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಡೆಯುವ ಸಾಧ್ಯತೆಗಳಿವೆ. ಗೋಹತ್ಯೆ, ಅಂತರ್ ನಂಬಿಕೆ ವಿವಾಹ ದಂತದ ಕ್ರಮಗಳಿಂದ ಮೋದಿ ಸರಕಾರ ಕೆಲವು ಸಮುದಾಯಗಳ ವಿರೋಧ ಕಟ್ಟಿಕೊಂಡಿವೆ. ಇವುಗಳ ಮೂಲಕ ದೇಶದ ಯುವಕರು ಹಾಗೂ ನಿರುದ್ಯೋಗಿಗಳ ಗಮನ ಬೇರೆಡೆ ಸೆಳೆಯುವ ಯತ್ನ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದಕ್ಕೆ ಪೂರಕವಾಗಿ ದೇಶಾದ್ಯಂತ ರೈತ ಚಳುವಳಿ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ. ಒಟ್ಟಾರೆ ಇದು ಮೋದಿ ಹಾಗೂ ಬಿಜೆಪಿಗೆ ಎಚ್ಚರದ ಗಂಟೆ ಎಂದೂ ವಿಶ್ಲೇಷಿಲಾಗುತ್ತಿದೆ.

Edited By :
PublicNext

PublicNext

11/12/2020 02:42 pm

Cinque Terre

71.45 K

Cinque Terre

11

ಸಂಬಂಧಿತ ಸುದ್ದಿ