ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಿಷತ್ ನಲ್ಲಿ ಮಂಡನೆಯಾಗದ ಗೋಹತ್ಯೆ ನಿಷೇಧ ವಿಧೇಯಕ : ಮತ್ತೊಂದು ಸುಗ್ರೀವಾಜ್ಞೆ?

ಬೆಂಗಳೂರು: ಸದನದಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದ ಕಾರಣ ಬಿಜೆಪಿಯ ಬಹು ನಿರೀಕ್ಷಿತ ಗೋಹತ್ಯೆ ನಿಷೇಧ ವಿಧೇಯಕ ಗುರುವಾರ ವಿಧಾನ ಪರಿಷತ್ ನಲ್ಲಿ ಮಂಡನೆಯೇ ಆಗಲಿಲ್ಲ.

ಇದರಿಂದಾಗಿ ಸರ್ಕಾರಕ್ಕೆ ಸುಗ್ರೀವಾಜ್ಞೆ ತರುವುದು ಅನಿವಾರ್ಯವಾಗಿದೆ.

ವಿಧಾನಸಭೆಯಲ್ಲಿ ಬುಧವಾರ ವಿಧೇಯಕಕ್ಕೆ ಅನುಮೋದನೆ ಸಿಕ್ಕ ಬಳಿಕ ಗುರುವಾರ ಪರಿಷತ್ ನಲ್ಲಿ ಮಂಡಿಸಬೇಕಾಗಿತ್ತು.

ಆದರೆ ಮಧ್ಯಾಹ್ನದ ಬಳಿಕ ಸಭಾಪತಿ ವಿರುದ್ಧದ ಅವಿಶ್ವಾಸದ ವಿಷಯದಲ್ಲಿ ಗದ್ದಲ ಉಂಟಾಗಿದ್ದರಿಂದ ಮಸೂದೆ ಮಂಡನೆಗೆ ಅವಕಾಶ ಸಿಗಲಿಲ್ಲ.

ಸಭಾಪತಿಗಳ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯ ವಿಚಾರವನ್ನು ಚರ್ಚೆಗೆ ತರುವಂತೆ ಬಿಜೆಪಿಯ ಆಯನೂರು ಮಂಜುನಾಥ್ ಪ್ರಸ್ತಾಪಿಸಿದರು.

ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಸಂಬಂಧಪಟ್ಟ ಸಚಿವರಿಲ್ಲದ ಕಾರಣ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಶುಕ್ರವಾರ ಸದನದಲ್ಲಿ ಮಂಡಿಸುವುದಾಗಿ ತಿಳಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ವಿಧೇಯಕ ಅಜೆಂಡಾದಲ್ಲಿರುವುದರಿಂದ ಇಂದೇ ಮಂಡಿಸಬೇಕು.

ಶುಕ್ರವಾರದಿಂದ ಗ್ರಾಮ ಪಂಚಾಯಿತಿ ಚುನಾವಣೆ ಕೆಲಸ ಮಾಡಬೇಕಿರುವುದರಿಂದ ಸದನ ಕಲಾಪ ಅಂತ್ಯಗೊಳಿಸುವಂತೆಯೂ ಆಗ್ರಹಿಸಿದರು.

ಇದರಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಗದ್ದಲ ಏರ್ಪಟ್ಟಿತ್ತು. ಆಯನೂರು ಮಂಜುನಾಥ್ ಮತ್ತೊಮ್ಮೆ ಅವಿಶ್ವಾಸ ನಿರ್ಣಯದ ಬಗ್ಗೆ ಪ್ರಸ್ತಾಪಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಅವಿಶ್ವಾಸ ನಿರ್ಣಯದ ಕುರಿತಂತೆ ಕಾನೂನು ತಜ್ಞರ ಸಲಹೆ ಪಡೆದು, ಕಡತದಲ್ಲಿ ಮಂಡಿಸಿದ್ದೇನೆ.

ಅದನ್ನು ಸದಸ್ಯರಿಗೆ ನೀಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು. ಬಳಿಕ ಬಿಜೆಪಿ ಸದಸ್ಯರು ಗದ್ದಲವೆಬ್ಬಿಸಿದರು. ಅದರ ನಡುವೆಯೇ ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿದರು.

ಸುಗ್ರೀವಾಜ್ಞೆ ದಿಕ್ಕು: ವಿಧೇಯಕ ಪರಿಷತ್ ನಲ್ಲಿ ಮಂಡನೆಯಾಗದಿರುವುದರಿಂದ ಬಹುತೇಕ ಮುಂದಿನ ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ತಂದು ಜಾರಿಮಾಡುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

11/12/2020 09:03 am

Cinque Terre

97 K

Cinque Terre

3

ಸಂಬಂಧಿತ ಸುದ್ದಿ