ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ 1964ರ ಗೋವಧೆ ಪ್ರತಿಬಂಧಕ ಕಾಯಿದೆ ಬರಖಾಸ್ತುಗೊಳಿಸುವ ಮೂಲಕ ಗೋಹತ್ಯೆ ಸಂಪೂರ್ಣ ನಿಷೇಧ ಮಾಡಲು ಬಿಜೆಪಿ ಸರಕಾರ ಸಜ್ಜಾಗುತ್ತಿದೆ. ಈ ನಿಟ್ಟಿನಲ್ಲಿ 2010ರಲ್ಲಿ ಮಂಡಿಸಲಾಗಿದ್ದ ವಿಧೇಯಕಕ್ಕೆ ಸೂಕ್ತ ತಿದ್ದುಪಡಿಯೊಂದಿಗೆ ಮರು ಜೀವ ನೀಡಲು ಯತ್ನಿಸಲಾಗುತ್ತಿದೆ.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಈ ಕುರಿತ ಪ್ರಯತ್ನ ನಡೆದಿತ್ತು. ಆದರೆ, ಪೂರ್ಣ ಪ್ರಮಾಣದಲ್ಲಿ ಗೋಹತ್ಯೆ ನಿಷೇಧಕ್ಕೆ ಕಾಯಿದೆ ಜಾರಿಗೊಳಿಸುವ ಬಿಜೆಪಿಯ ಉತ್ಸಾಹಕ್ಕೆ ಅಂದಿನ ರಾಜ್ಯಪಾಲರೇ ಕಡಿವಾಣ ಹಾಕಿದ್ದರು. ಹಾಗಾಗಿ 1964ರ ಕಾಯಿದೆಯೇ ರಾಜ್ಯದಲ್ಲಿ ಚಾಲ್ತಿಯಲ್ಲಿದೆ. ಈ ಕಾಯಿದೆ ಗೋಸಂರಕ್ಷಣೆಗೆ ಬೇಕಾದಷ್ಟು ಬಲಾಢ್ಯವಾಗಿಲ್ಲ. ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ಧ ಕಟ್ಟುನಿಟ್ಟು ಕ್ರಮ ಕೈಗೊಳ್ಳಲು ಈ ಕಾಯಿದೆಯಲ್ಲಿ ಅವಕಾಶ ಇಲ್ಲ ಎನ್ನುವುದು ಬಿಜೆಪಿಯ ವಾದ. ಸಣ್ಣಪುಟ್ಟ ತಿದ್ದುಪಡಿಯೊಂದಿಗೆ 2010ರ ವಿಧೇಯಕ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ. ತಿದ್ದುಪಡಿ ಪ್ರಸ್ತಾವಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
PublicNext
04/12/2020 08:11 am