ದೆಹಲಿ: ಇನ್ನು ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲೂ ಪ್ರಯಾಣಿಕರು ಪ್ಲಾಸ್ಟಿಕ್, ಪೇಪರ್ ಬದಲು ಮಣ್ಣಿನಿಂದ ಮಾಡಿದ ಕಪ್‌ಗಳಲ್ಲಿ ಚಹಾ ಹೀರಲಿದ್ದಾರೆ.
ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರು ಭಾನುವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಧಿಗಾವರ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಧಿಗಾವರ–ಬಂಡಿಕುಯಿ ವಿಭಾಗವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪ್ಲಾಸ್ಟಿಕ್ ಮುಕ್ತ ಭಾರತದ ಭಾಗವಾಗಿ ರೈಲ್ವೆ ನಿಲ್ದಾಣಗಳಲ್ಲಿ ಕುಲ್ಹಾದ್ ಅಂದರೆ, ಮಣ್ಣಿನ ಕುಡಿಕೆಗಳಿಂದ ಮಾತ್ರ ಇನ್ನು ಮುಂದೆ ಚಹಾ ಸಿಗುತ್ತದೆ. ದೇಶ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಗುರಿಯತ್ತ ಸಾಗುತ್ತಿದೆ. ಈಗಾಗಲೇ 400 ರೈಲ್ವೇ ನಿಲ್ದಾಣದಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಮುಂಬರುವ ದಿನಗಳಲ್ಲಿ ದೇಶದ ಎಲ್ಲಾ ರೈಲ್ವೇ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.
ಮಣ್ಣಿನ ಕುಡಿಕೆ ತಯಾರಿಸುವ ಕುಂಬಾರರಿಗೆ ಉದ್ಯೋಗ ಸಿಗುತ್ತದೆ. ನೈಸರ್ಗಿಕವಾಗಿ ಯೋಚಿಸಿದರೆ ಒಳ್ಳೆಯ ವ್ಯವಸ್ಥೆ. ಪರಿಸರಕ್ಕೆ ಮಣ್ಣಿನ ಕುಡಿಕೆಯಿಂದ ಯಾವುದೇ ಹಾನಿ ಇಲ್ಲ. ಆದ್ದರಿಂದ ಕುಲ್ಹಾದ್ನಲ್ಲಿ ಚಹಾ ಮಾರಾಟ ಮಾಡುವುದು ನಮ್ಮ ಉದ್ದೇಶ ಎಂದು ಗೋಯಲ್ ತಿಳಿಸಿದರು.
PublicNext
30/11/2020 03:19 pm