ನವದೆಹಲಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ.
ಬಿ.ಎಲ್ ಸಂತೋಷ್ ಅವರ ದೆಹಲಿ ನಿವಾಸದಲ್ಲಿ ಭೇಟಿಯಾದ ರಮೇಶ್, ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೂ ಮುನ್ನ ದೆಹಲಿಗೆ ಆಗಮಿಸಿದ್ದ ರಮೇಶ್ ಜಾರಕಿಹೊಳಿ, ಇದೀಗ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದಾರೆ.
ತಮ್ಮ ಬೆಂಬಲಿಗರಿಗೆ ಸಚಿವ ಸ್ಥಾನ ಕೊಡಿಸಲು ರಮೇಶ್ ಜಾರಕಿಹೊಳಿ ನಿರಂತರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗದೇ ಪರ್ಯಾಯ ಕಾರ್ಯತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿ ಇದೆ.
ದೆಹಲಿಗೆ ತೆರಳಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಾರಕಿಹೊಳಿ, ಸಿಎಂ ಆಗಮನದ ವಿಚಾರ ನನಗೆ ಗೊತ್ತಿರಲಿಲ್ಲ. ನಾನು ಬಂದ ಬಳಿಕ ಸಿಎಂ ದೆಹಲಿಗೆ ಬಂದಿದ್ದಾರೆ. ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ರಾಜ್ಯದ ಜಲ ಯೋಜನೆಗಳ ಕುರಿತು ಚರ್ಚೆ ನಡೆಸಿದ್ದೇನೆ. ಆದರೆ ಸಿಎಂ ನಿಗದಿತ ಸಮಯಕ್ಕಿಂತ ಬೇಗ ಬೆಂಗಳೂರಿಗೆ ವಾಪಸ್ ಆಗಿದ್ದರಿಂದ ಅವರನ್ನು ದೆಹಲಿಯಲ್ಲಿ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದಿದ್ದರು.
ಕಳೆದ ಕೆಲ ದಿನಗಳ ಹಿಂದಷ್ಟೇ ಜಾರಕಿಹೊಳಿ ಅವರು ಪ್ರಹ್ಲಾದ್ ಜೋಶಿಯನ್ನು ಭೇಟಿ ಮಾಡಿದ್ದರು. ಸದ್ಯ ಜೆ.ಪಿ ನಡ್ಡಾ ಭೇಟಿಗೂ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ.
PublicNext
20/11/2020 03:23 pm