ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಾಲಿಬಾನಿಗಳಿಗೆ ಹೋಲಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಕಟೀಲ್, ತಾಲಿಬಾನಿಗಳ ತರ ಹುಲಿ, ಬಂಡೆ ಅಂತ ಇವರೂ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ಪ್ರಾಂತ್ಯ ಪ್ರಶಿಕ್ಷಣ ವರ್ಗದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಳೀನ್ ಕುಮಾರ್ ಕಟೀಲ್ ಅವರು, ತಾಲಿಬಾನಿಗಳು ಕೂಡ ಮಿಲಿಟಂಟ್, ಕ್ಯಾಪ್ಟನ್ ಅಂತ ಹಲವು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅವರು ಬಂಡೆ, ಹುಲಿ ಅಂತ ಹೆಸರಿಟ್ಟುಕೊಂಡು ಓಡಾಡುತ್ತಿದ್ದಾರೆ. ಚುನಾವಣೆಯ ನಂತರ ಬಂಡೆಯೂ ಇಲ್ಲ, ಹುಲಿಯೂ ಇಲ್ಲದ ದುಸ್ಥಿತಿಗೆ ಕಾಂಗ್ರೆಸ್ ತಳ್ಳಲ್ಪಟ್ಟಿದೆ ಎಂದು ಟೀಕೆ ಮಾಡಿದರು.
ಹುಡುಗನಿಗೆ ಪ್ರಾಯ ಆಗಿದೆ. ಮದುವೆಯಾಗಬೇಕಾದ ಹುಡುಗಿ ಹುಟ್ಟಿಯೇ ಇಲ್ಲ. ಮದುವೆ ನಿಶ್ಚಯಕ್ಕೂ ಮೊದಲೇ ಮಗುವಿಗೆ ಹೆಸರಿಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಂದಿನ ನಾಯಕತ್ವಕ್ಕೆ ಕಟೀಲ್ ಕಟುಕಿದರು. ಕಾಂಗ್ರೆಸ್ ಪಕ್ಷದಲ್ಲಿ ಈಗಲೇ ಯಾರು ಸಿಎಂ ಅಭ್ಯರ್ಥಿ ಎಂಬ ಚರ್ಚೆ ಆರಂಭವಾಗಿದೆ. ಸಿದ್ರಾಮಯ್ಯ ಅವರು ನಾನೇ ಮುಖ್ಯಮಂತ್ರಿ ಅಂತಾರೆ. ಜಮೀರ್ ಅಹ್ಮದ್ ಸಿದ್ದರಾಮಯ್ಯನೇ ಮುಖ್ಯಮಂತ್ರಿ ಅಂತಾರೆ. ಸೌಮ್ಯಾ ರೆಡ್ಡಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಂತಾರೆ. ಹೀಗಾಗಿ ಕಾಂಗ್ರೆಸ್ಸಿನಲ್ಲಿ ಮಾತ್ರ ನಾಯಕತ್ವದ ಗೊಂದಲ ಇರೋದು. ಸಂಗೀತ ಕುರ್ಚಿ ಸ್ಪರ್ಧೆ ಆರಂಭವಾಗಿರುವುದು ಕಾಂಗ್ರೆಸ್ ಪಕ್ಷದಲ್ಲಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 30 ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಕಟೀಲ್ ಭವಿಷ್ಯ ನುಡಿದಿದ್ದಾರೆ.
PublicNext
12/11/2020 03:31 pm