ಮುಂಬೈ: ಒಂದು ವಾರ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಂತರ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಪಡೆದು ಬಿಡುಗಡೆಗೊಂಡ ರಿಪಬ್ಲಿಕ್ ಟಿವಿ ಸಂಪಾದಕ ತಮ್ಮ ಟಿವಿ ಚಾನೆಲ್ ನ ನ್ಯೂಸ್ ರೂಂನಿಂದ ಮಾತನಾಡಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಮಾತಲ್ಲಿ ಹರಿಹಾಯ್ದ ಅವರು, ತಮ್ಮನ್ನು ಸುಳ್ಳು ಕೇಸಿನಲ್ಲಿ ಬಂಧಿಸಲಾಗಿದೆ ಎಂದು ಆರೋಪಿಸಿದರು.
ಉದ್ಧವ್ ಠಾಕ್ರೆ ಇಲ್ಲಿ ಕೇಳಿ. ನೀವು ಎಲ್ಲವನ್ನೂ ಕಳೆದುಕೊಂಡಿರಿ. ನೀವು ಸೋತುಹೋದಿರಿ. ಒಂದು ಹಳೆಯ ಸುಳ್ಳು ಕೇಸಿನಲ್ಲಿ ನನ್ನನ್ನು ಸಿಕ್ಕಿಹಾಕಿಸಿ ಬಂಧಿಸಿದಿರಿ. ಅದಕ್ಕಾಗಿ ನನ್ನ ಕ್ಷಮೆಯನ್ನು ಕೂಡ ಕೇಳಲಿಲ್ಲ ಎಂದರು.
ಆಗ ನ್ಯೂಸ್ ರೂಂನಲ್ಲಿದ್ದ ಅವರ ಸಹೋದ್ಯೋಗಿಗಳು ಅವರಿಗೆ ಚಪ್ಪಾಳೆ ತಟ್ಟಿ ಬೆಂಬಲಿಸಿದರು. ನಾನು ಜೈಲಿನಲ್ಲಿದ್ದುಕೊಂಡೇ ಸುದ್ದಿ ವಾಹಿನಿಯನ್ನು ಆರಂಭಿಸುತ್ತೇನೆ. ಆದರೆ ನಿಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ ಎಂದು ಸಹ ಮುಖ್ಯಮಂತ್ರಿಗೆ ಟಾಂಗ್ ಕೊಟ್ಟರು.
ಆಟ ಈಗಷ್ಟೇ ಆರಂಭವಾಗಿದೆ, ರಿಪಬ್ಲಿಕ್ ಟಿವಿ ಚಾನೆಲ್ ನ್ನು ಎಲ್ಲಾ ಸ್ಥಳೀಯ ಭಾಷೆಗಳಲ್ಲಿಯೂ ಆರಂಭಿಸಲಾಗುವುದು. ಅಂತರಾಷ್ಟ್ರೀಯ ಮಾಧ್ಯಮವನ್ನು ಸಹ ತೆರೆಯುತ್ತೇನೆ ಎಂದು ಘೋಷಿಸಿದರು.
ತಮಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳಿದ ಅವರು, ಕೆಲವು ವಾಕ್ಯಗಳನ್ನು ಮರಾಠಿ ಭಾಷೆಯಲ್ಲಿ ಮಾತನಾಡಿ ಜೈ ಮಹಾರಾಷ್ಟ್ರ ಎಂದು ಕೂಗಿದರು.
PublicNext
12/11/2020 10:05 am