ಬಾಗಲಕೋಟೆ : ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದಾರೆ.
ತಮ್ಮದೇ ಪಕ್ಷದ ಮಹಿಳಾ ಸದಸ್ಯೆಯನ್ನು ಶಾಸಕ, ಕೆ.ಎಚ್.ಡಿ.ಸಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಎಳೆದಾಡಿ ಅವಮಾನಿಸದ ಘಟನೆ ಎಲ್ಲೆಡೆ ವೈರಲ್ ಆಗಿದ್ದು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಾಲಿಂಗಪುರ ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 10, ಬಿಜೆಪಿ 13 ಸ್ಥಾನ ಹೊಂದಿದೆ.
ನ.9ರಂದು ಸಂಜೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು.
ಈ ವೇಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿಯ ಮೂವರು ಸದಸ್ಯೆಯರು, ಅವಕಾಶ ಸಿಗದಕ್ಕೆ ಬೇಸತ್ತು, ಕಾಂಗ್ರೆಸ್ ಸದಸ್ಯರೊಂದಿಗೆ ಗುರುತಿಸಿಕೊಂಡಿದ್ದರು.
ಬಿಜೆಪಿಯ ಸದಸ್ಯರಾದ ಗೋದಾವರಿ ಬಾಟ, ಚಾಂದಿನಿ ನಾಯಕ ಹಾಗೂ ಸವಿತಾ ಹುರಕಡ್ಲಿ ಅವರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡು, ಸವಿತಾ ಹುರಕಡ್ಲಿ ಅದ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದಾರೆ.
PublicNext
11/11/2020 12:15 pm