ದಾವಣಗೆರೆ: ಕಬ್ಬಿನ ಬೆಲೆ ನಿಗದಿ ವಿಚಾರದಲ್ಲಿ ದ್ರೋಹ ಬಗೆಯಲಾಗುತ್ತಿದೆ. ಕಬ್ಬು ಬೆಳೆಗಾರರು ಭಿಕ್ಷೆ ಕೇಳುತ್ತಿಲ್ಲ. ಒಂದು ಕ್ವಿಂಟಾಲ್ ಗೆ ಕೇವಲ 50 ರೂಪಾಯಿ ಹೆಚ್ಚಳ ಮಾಡಿದ್ದು ಏನಕ್ಕೂ ಸಾಕಾಗುವುದಿಲ್ಲ. ಸೂಕ್ತ ಧಾರಣೆ ನೀಡದಿದ್ದರೆ ಅಕ್ಟೋಬರ್ 5 ರಂದು ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಬ್ಬಿನ ಎಥನಾಲ್ ಲಾಭದಲ್ಲಿ ರೈತರಿಗೆ ಲಾಭ ಹಂಚಿಕೆ ಮಾಡುತ್ತಿಲ್ಲ ,ಎಫ್ ಆರ್ ಪಿ ದರ ಪುನರ್ ಪರಿಶೀಲಿಸಬೇಕು. ಕೇಂದ್ರ ಸರ್ಕಾರ ಸಕ್ಕರೆ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡುತ್ತಿದೆ. ವರ್ಷಕ್ಕೆ ಮೂರು ನಾಲ್ಕು ಬಾರಿ ಪೆಟ್ರೋಲ್, ಡೀಸೆಲ್ ಗ್ಯಾಸ್ ಬೆಲೆ ಏರಿಸುವ ಕೇಂದ್ರ ಸರ್ಕಾರ ಎರಡು ವರ್ಷಗಳಿಂದಲೂ ಕಬ್ಬಿನ ದರ ನಿಗದಿ ಮಾಡಿಲ್ಲ. ಈಗ ಕೇವಲ ಕ್ವಿಂಟಲ್ ಗೆ 5ರೂ ಏರಿಕೆ ಮಾಡಿ ಆವೈಜ್ಞಾನಿಕ ಬೆಲೆ ನಿಗದಿ ಮಾಡಿದೆ.
ಕೂಡಲೇ ಪುನರ್ ಪರಿಶೀಲಿಸಬೇಕು. ಸರ್ಕಾರದ ಕೃಷಿ ಇಲಾಖೆಯ ಪ್ರಕಾರ ಟನ್ ಕಬ್ಬು ಬೆಳೆಯಲು ಉತ್ಪಾದನಾ ವೆಚ್ಚ 3200 ,ಇದಕ್ಕೆ ಲಾಭ ಸೇರಿಸಿ ದರ ನಿಗದಿಪಡಿಸಬೇಕು. ಉತ್ತರಪ್ರದೇಶದಲ್ಲಿ ಶೇಕಡಾ 9 ಇಳುವರಿ ಬರುವ ಕಬ್ಬಿಗೆ 3200 ದರ ನಿಗದಿ ಮಾಡಿದ್ದಾರೆ. ರಾಜ್ಯದಲ್ಲಿ ಹತ್ತಕ್ಕಿಂತ ಹೆಚ್ಚು ಇಳುವರಿ ಇರುವ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ್ ಬಂದ್ ಗೆ ಬೆಂಬಲ: ಕೇಂದ್ರ ಸರ್ಕಾರ ರೈತರ ಸಹನೆ ಕೆಣಕಬಾರದು. ಅನ್ನದಾತರು ಸಿಡಿದೆದ್ದರೆ ಪರಿಣಾಮ ನೆಟ್ಟಗಿರದು. ಕೇಂದ್ರದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ತರಬೇಕೆಂದು ಒತ್ತಾಯಿಸಿರುವ ಕರೆ ನೀಡಲಾಗಿರುವ ಭಾರತ್ ಬಂದ್ ಬೆಂಬಲಿಸಿ ಸೆಪ್ಟಂಬರ್ 27 ರಂದು ರಾಜ್ಯದಲ್ಲಿ ಕರ್ನಾಟಕ ಬಂದ್ ನಡೆಸಲು ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧರಿಸಿದೆ ಎಂದು ತಿಳಿಸಿದರು.
PublicNext
23/09/2021 06:12 pm