ಬೆಂಗಳೂರು: ಪ್ರವಾಹ ಪೀಡಿತ ರೈತರಿಗೆ ಪರಿಹಾರ ನೀಡಲು ದುಡ್ಡಿಲ್ಲ, ಕೊರೊನಾ ಚಿಕಿತ್ಸೆಗೆ ದುಡ್ಡಿಲ್ಲ, ಬೊಕ್ಕಸ ಖಾಲಿಯಾಗಿದೆ ಎಂದು ರಾಜ್ಯ ಸರ್ಕಾರ 90,000 ಕೋಟಿ ರೂಪಾಯಿ ಸಾಲ ಮಾಡಲು ಹೊರಟಿದೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಮುಖ್ಯಮಂತ್ರಿಗಳು ಮತ್ತು ಸಚಿವರ ಜೇಬಿಗೆ ಹೋಯಿತಾ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, 'ಕಳೆದ ವರ್ಷದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರ ಕೇಂದ್ರದಿಂದ ಪರಿಹಾರ ಕೇಳಿದ್ದು ರೂ.35,000 ಕೋಟಿ, ಅವರು ನೀಡಿದ್ದು 1,654 ಕೋಟಿ ರೂ. ಈ ಬಾರಿ ರಾಜ್ಯ ಸರ್ಕಾರ ಈ ವರೆಗೆ ಕೇಳಿದ್ದು 4,000 ಕೋಟಿ ರೂ. ಕೇಂದ್ರದಿಂದ ಸಮರ್ಪಕ ಪರಿಹಾರ ಕೇಳಲೂ ನಿಮಗೆ ಭಯನಾ? ಉತ್ತರಕೊಡಿ ಬಿಎಸ್‌ವೈ' ಎಂದು ಕುಟುಕಿದ್ದಾರೆ.
'ಕಳೆದ ವರ್ಷ ಸರ್ಕಾರ ನಡೆಸಿದ್ದ ಸಮೀಕ್ಷೆಯಂತೆ ನೆರೆಯಿಂದಾಗಿ ಹಾನಿಗೀಡಾದ ಮನೆಗಳು 2,24,000, ಪರಿಹಾರ ನೀಡಿರುವುದು ಮಾತ್ರ 1,24,000 ಮನೆಗಳಿಗೆ ಎಂದು ಕೇಂದ್ರಕ್ಕೆ ವರದಿ ಕಳಿಸಲಾಗಿದೆ. ಇನ್ನು ಈ ವರ್ಷದ ಮಳೆಗೆ ಹಾನಿಗೀಡಾಗಿರುವ ಮನೆಗಳಿಗೆ ಸರ್ಕಾರ ಪರಿಹಾರ ನೀಡುವುದು ಯಾವಾಗ? ಉತ್ತರಕೊಡಿ ಬಿಎಸ್‌ವೈ' ಎಂದು ಆಗ್ರಹಿಸಿದ್ದಾರೆ.
PublicNext
02/11/2020 03:36 pm