ಪ್ಯಾರಿಸ್: ಇಲ್ಲಿನ ನೈಸ್ ನಗರದ ಚರ್ಚ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಫ್ರಾನ್ಸ್ ಆಂತರಿಕ ಸಚಿವ ಗೆರಾಲ್ಡ್ ಡರ್ಮನಿನ್, ನಾವು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು ಯುದ್ಧದ ಮೈದಾನದಲ್ಲಿದ್ದು, ನಮ್ಮ ಶತ್ರು ಇಸ್ಲಾಮಿಕ್ ಭಯೋತ್ಪಾದನೆ ಎಂದು ಗೆರಾಲ್ಡ್ ಡರ್ಮನಿನ್ ಘೋಷಿಸಿದ್ದಾರೆ. ಈ ಯುದ್ಧ ಸುದೀರ್ಘವಾಗಿದ್ದು, ಅಂತಿಮ ಜಯ ನಮ್ಮದಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಫ್ರಾನ್ಸ್‌ನಲ್ಲಿ ಇಂತಹ ಮತ್ತಷ್ಟು ಭಯೋತ್ಪಾದಕ ದಾಳಿಗಳು ನಡೆಯಲಿವೆ ಎಂದು ಶಂಕೆ ವ್ಯಕ್ತಪಡಿಸಿರುವ ಡರ್ಮನಿನ್, ನಾವು ಈ ದಾಳಿಗಳನ್ನು ಧೈರ್ಯವಾಗಿ ಎದುರಿಸಲಿದ್ದೇವೆ ಎಂದು ಭರವಸೆ ನೀಡಿದರು. ನಮ್ಮ ಶತ್ರುಗಳು ಬಿಡಿಬಿಯಾಗಿ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಗುರುತಿಸುವುದು ಸವಾಲಿನ ಕೆಲಸ. ಆದರೆ ದೇಶದ ಸಂರಕ್ಷಣೆ ನಮ್ಮ ಜವಾಬ್ದಾರಿಯಾಗಿದ್ದು, ಜನತೆಯ ಸಹಕಾರದೊಂದಿಗೆ ನಾವು ಈ ಯುದ್ಧವನ್ನು ಗೆಲ್ಲಲಿದ್ದೇವೆ ಎಂದು ಡರ್ಮನಿನ್ ವಿಶ್ವಾಸ ವ್ಯಕ್ತಪಡಿಸಿದರು.
PublicNext
30/10/2020 06:14 pm