ಲಕ್ನೋ: ಅತ್ಯಾಚಾರ, ಕೊಲೆ, ಗ್ಯಾಂಗ್‌ರೇಪ್ ಗಳಂತ ಅಪರಾಧಗಳಿಂದ ಪದೇ ಪದೇ ಸುದ್ದಿಯಾಗುತ್ತಿದ್ದ ಉತ್ತರ ಪ್ರದೇಶ ಈಗ ಅಪರಾಧಿಗಳಿಗೆ ನಡುಕ ಹುಟ್ಟಿಸುವ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಹೌದು. ಪೊಲೀಸ್ ಹುತಾತ್ಮ ದಿನದ ಅಂಗವಾಗಿ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಉತ್ತರ ಪ್ರದೇಶ ಪೊಲೀಸರು ಅಪರಾಧಿಗಳಿಗೆ ತಕ್ಕಶಾಸ್ತಿ ಮಾಡಿದ ಮಾಹಿತಿಯನ್ನು ಬಹಿರಂಗಪಡಿಸಿದೆ. ಅದರಲ್ಲೂ ಕಳೆದ 24 ಗಂಟೆಯಲ್ಲಿ (ಅಕ್ಟೋಬರ್ 19 ಹಾಗೂ 20)ರಲ್ಲಿ 23 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದು ಕುತೂಹಲದ ಸಂಗತಿಯಾಗಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದವರ ಪೈಕಿ ಹೆಚ್ಚಿನ ಅಪರಾಧಿಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರೇ ಆಗಿದ್ದಾರೆ. ಅಷ್ಟೇ ಅಲ್ಲದೆ 31 ಆರೋಪಿಗಳಿಗೆ ಭಾರೀ ಮೊತ್ತದ ದಂಡ ವಿಧಿಸಲಾಗಿದೆ. ಇನ್ನು ಕಳೆದ ಒಂದು ವರ್ಷದಲ್ಲಿ ಮಹಿಳೆಯರ ಮೇಲೆ ಅಪರಾಧ ಎಸಗಿದ್ದ 11 ಪ್ರಕರಣಗಳಲ್ಲಿನ 14 ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ.
49 ಪ್ರಕರಣಗಳಲ್ಲಿ ಜಾಮೀನು ರದ್ದುಗೊಳಿಸಲಾಗಿದ್ದು, 28 ಅಪರಾಧಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಜೊತೆಗೆ 2017ರ ಮಾರ್ಚ್ 20ರಿಂದ ಈ ಅಕ್ಟೋಬರ್ 5ರವರೆಗಿನ ಎನ್ಕೌಂಟರ್ ಅಂಕಿಅಂಶವನ್ನು ಕೂಡ ಬಹಿರಂಗಪಡಿಸಲಾಗಿದೆ. ಈ ಮಾಹಿತಿ ಪ್ರಕಾರ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮಾಡಲಾದ ಎನ್‌ಕೌಂಟರ್‌ಗಳಲ್ಲಿ ಇಲ್ಲಿಯವರೆಗೆ ಒಟ್ಟು 125 ಮಂದಿ ಮೃತಪಟ್ಟಿದ್ದು, 2,607 ಮಂದಿ ಗಾಯಗೊಂಡಿದ್ದಾರೆ. 2019-20ರ ಅವಧಿಯಲ್ಲಿ ಕರ್ತವ್ಯದಲ್ಲಿ 9 ಪೊಲೀಸರು ಹುತಾತ್ಮರಾಗಿದ್ದಾರೆ.
PublicNext
21/10/2020 04:51 pm