ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಣ್ಮರೆಯಾದ ಸ್ವರ ಭಾಸ್ಕರ: ಸುಬ್ಬಣ್ಣರ ಶಾರೀರ ಇಲ್ಲಿ ಅಜರಾಮರ

ಕಾಡು ಕುದುರೆ ಓಡಿ ಬಂದಿತ್ತ...ಈ ಹಾಡು ಕೇಳಿರದ ಕನ್ನಡಿಗರೇ ಇಲ್ಲ. ವಿಶಿಷ್ಟ ಕಂಠದ, ಮೃದು ಸ್ವಭಾವದ ಹಿರಿಯ ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಮ್ಮನ್ನು ಅಗಲಿದ್ದಾರೆ.‌

ಕಾವ್ಯದೊಳಗಿನ ಭಾವಕ್ಕೆ ಜೀವ ತುಂಬುತ್ತಿದ್ದ ಸ್ವರ ಭಾಸ್ಕರನ ಅಗಲುವಿಕೆ ಸುಗಮ ಸಂಗೀತ ಲೋಕಕ್ಕೆ ತುಂಬಲಾಗದ ನಷ್ಟವನ್ನುಂಟು ಮಾಡಿದೆ. 1938ರಲ್ಲಿ ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ಜನಿಸಿದ ಇವರಿಗೆ ಮನೆಯಲ್ಲಿನ ಧಾರ್ಮಿಕ‌, ಸಾಂಪ್ರದಾಯಿಕ ವಾತಾವರಣ ಸಂಗೀತಾಭ್ಯಾಸಕ್ಕೆ ಪ್ರೇರೇಪಣೆ ನೀಡಿತು. ಮುಂದೆ ವಕೀಲ ವೃತ್ತಿ ಮಾಡಿದರೂ ಸಂಗೀತ ಸರಸ್ವತಿಯ ಸೆಳೆತ ಸಲೀಸಾಗಿ ಇವರನ್ನು ಬಿಟ್ಟುಕೊಡಲಿಲ್ಲ. ಪುನಃ ನಾದ ಕೃಷಿ ಆರಂಭಿಸಿದ ಇವರು ಕನ್ನಡ ಸಾಹಿತ್ಯದ ನವ್ಯ ಕವಿಗಳ ಪ್ರಸಿದ್ಧ ಕವಿತೆಗಳಿಗೆ ಸ್ವರ ಸಂಯೋಜಿಸಿ ಕನ್ನಡಿಗರಿಗೆ ರುಚಿಸುವಂತೆ ಹಾಡಿದ್ದಾರೆ. ಜತೆಗೆ ಸುಗಮ ಸಂಗೀತದ ದೈತ್ಯ ಪ್ರತಿಭೆಗಳಾದ ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ಬಿ.ಕೆ ಸುಮಿತ್ರಾ ಸೇರಿ ಅನೇಕರ ರಾಗಗಳಿಗೆ ಶಾರೀರವಾಗಿದ್ದಾರೆ. ಇವರು ಹಾಡಿದ ರಾಷ್ಟ್ರಕವಿ ಕುವೆಂಪು ವಿತಚಿತ ಆನಂದಮಯ ಈ ಜಗ ಹೃದಯ ಹಾಡು ಹಾಗೂ ಬಾರಿಸು ಕನ್ನಡ ಡಿಂಡಿಮವ ಕನ್ನಡಿಗರ ಹೃದಯದಲ್ಲಿದೆ. ಸಂತ ಶಿಶುನಾಳ ಷರೀಫರ ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ, ಅಳಬೇಡ ತಂಗಿ ಅಳಬೇಡ, ಕೋಡಗನ ಕೋಳಿ ನುಂಗಿತ್ತ ಹಾಡುಗಳು ಸ್ಮರಣೀಯ.

ಆರಂಭದ ದಿನಗಳಲ್ಲಿ ಕೆಲವರು ನಿಮ್ಮದು ತೀರಾ ಗಡಸು ಧ್ವನಿ ಎಂದು ತಾತ್ಸಾರ ಮಾಡಿದ್ದರಂತೆ. ಆದರೆ ಮುಂದೆ ಅದೇ ಗಡಸು ಧ್ವನಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿತು ಎಂಬುದು ಕನ್ನಡ ನೆಲದ ಹೆಮ್ಮೆ. ಕನ್ನಡದ ಅಸ್ಮಿತೆಯ ವಿಚಾರದಲ್ಲಿ ಸದಾ ಗಟ್ಟಿ ನಿಲುವು ತಳೆಯುತ್ತಿದ್ದ ಶಿವಮೊಗ್ಗ ಸುಬ್ಬಣ್ಣನವರು ಕನ್ನಡಾಂಬೆಯ ಆಸ್ಥಾನ ಸೇರಿದ್ದಾರೆ.

ತಮಗೆ ಸಂದಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ, ಬಿರುದು ಸನ್ಮಾನಗಳಿಗೆ ಸಾರ್ಥಕತೆ ತಂದಿರುವ ಶಿವಮೊಗ್ಗ ಸುಬ್ಬಣ್ಣನವರ ಸಂಗೀತ ಸಾಧನೆ ಶಾಶ್ವತ. ಅಗಲಿದ ಸಂಗೀತ ಸಂತನಿಗೆ ಕನ್ನಡಿಗರಿಂದ ನಾದ ನಮನ.

Edited By : Shivu K
PublicNext

PublicNext

12/08/2022 10:12 pm

Cinque Terre

161.87 K

Cinque Terre

2