ಬೆಂಗಳೂರು: ಹಿರಿಯ ವಿದ್ವಾಂಸ, ಪ್ರವಚನಕಾರ ಪ್ರೊ. ಕೆ.ಎಸ್. ನಾರಾಯಣಾಚಾರ್ಯ (88) ಅವರು ಶುಕ್ರವಾರ ಮುಂಜಾನೆ 2 ಗಂಟೆಗೆ ನಿಧನರಾಗಿದ್ದಾರೆ.
ಕೆ.ಎಸ್. ನಾರಾಯಣಾಚಾರ್ಯ ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ನ್ಯೂ ಬಿಇಎಲ್ ರಸ್ತೆಯ ಜಲದರ್ಶಿನಿ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಮಾಯಣಾಚಾರ್ಯ ಎಂದೇ ಪ್ರೊ. ಕೆ.ಎಸ್.ನಾರಾಯಣಾಚಾರ್ಯ ಪ್ರಸಿದ್ಧಿ ಪಡೆದಿದ್ದರು. ಅವರು ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಸೇರಿದಂತೆ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದರು. ಕನ್ನಡ, ಇಂಗ್ಲಿಷ್, ತಮಿಳಿನಲ್ಲೂ ರಾಮಾಯಾಣದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು.
ಕೆ. ಎಸ್. ನಾರಾಯಣಾಚಾರ್ಯ ಅವರು ಕನ್ನಡದ ಭಾರತೀಯ ಸಂಸ್ಕೃತಿಯ ಲೇಖಕರು, ಪ್ರಚಾರಕರು ಮತ್ತು ಪ್ರವಚನಕಾರರು. ಇವರು 1933ರಲ್ಲಿ ಕನಕಪುರದ ವೈದಿಕ ಶ್ರೀ ವೈಷ್ಣವ ಕುಟುಂಬದಲ್ಲಿ ಜನಿಸಿದರು. ಬೇಂದ್ರೆಯವರಿಂದ ಪ್ರೇರಣೆಗೊಳಗಾಗಿ ಇವರು ಪ್ರವಚನಗಳಿಂದ ಲೇಖನದೆಡೆಗೂ ಮುಖ ಮಾಡಿದರು. ಕೆ. ಎಸ್. ನಾರಾಯಣಾಚಾರ್ಯ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ(1954), ಬಿ.ಎ (ಆನರ್ಸ್ 1957), ಎಂ.ಎ (ಇಂಗ್ಲಿಷ್ 1958) ಪದವಿ ಪಡೆದಿದ್ದರು.
ಕನ್ನಡದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ತಮ್ಮ ಪ್ರವಚನಗಳು ಮತ್ತು ವಿವಿಧ ಮಾಧ್ಯಮಗಳ ಚರ್ಚೆಗಳಲ್ಲಿ ನಿರಂತರವಾಗಿ ನಾಡು-ನುಡಿ, ಸಂಸ್ಕೃತಿ, ಸಂಪ್ರದಾಯ ಮತ್ತು ಸಂಸ್ಕಾರಗಳ ಬಗ್ಗೆ ಆಧಿಕಾರಯುತವಾಗಿ ಮಾತನಾಡುತ್ತಿದ್ದ ಅವರು, 'ನಡೆದಾಡುವ ವಿಶ್ವಕೋಶ' ಎಂದೇ ಖ್ಯಾತರಾಗಿದ್ದರು.
PublicNext
26/11/2021 10:25 am