ದಾವಣಗೆರೆ: ಶಾಲಾ ಕಾಲೇಜುಗಳಿಗೆ ತೆರಳಲು ಸೂಕ್ತ ಸಮಯದಲ್ಲಿ ಬಸ್ ಸಂಚಾರ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿನಿಯರು, ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ಎಂದಿನಂತೆ ಸಂಚರಿಸುವ ಕೆ ಎಸ್ ಆರ್ ಟಿಸಿ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಹೆಬ್ಬಾಳು ಗ್ರಾಮದ ಸುತ್ತಮುತ್ತಲಿನ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ನಿತ್ಯವೂ ದಾವಣಗೆರೆಗೆ ಆಗಮಿಸುತ್ತಾರೆ. ಆದ್ರೆ, ಬೆಳಿಗ್ಗೆ ಸರಿಯಾದ ವೇಳೆಗೆ ಬಸ್ ಇಲ್ಲ. ಇದರಿಂದಾಗಿ ಶಾಲಾ ಕಾಲೇಜಿಗೆ ತಡವಾಗಿ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಮೊದಲ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟವರ ಗಮನಕ್ಕೆ ತಂದಿದ್ದರೂ ಪ್ರಯೋಜನ ಮಾತ್ರ ಶೂನ್ಯ.
ಎಷ್ಟೇ ಬಾರಿ ಮನವಿ ಮಾಡಿದರೂ ಸ್ಪಂದಿಸದ ಆರ್ ಟಿಒ ಹಾಗೂ ಜಿಲ್ಲಾಡಳಿತದ ವಿರುದ್ಧ ಸಿಟ್ಟಿಗೆದ್ದ ಪೋಷಕರು ಚಿತ್ರದುರ್ಗ - ದಾವಣಗೆರೆ ನಡುವೆ ನಿತ್ಯವೂ ಓಡಾಡುವ ಬಸ್ಸುಗಳನ್ನು ತಡೆಹಿಡಿದು ಪ್ರತಿಭಟಿಸಲಾಯಿತು.
ಹೆಬ್ಬಾಳ ಡಿಪೋ ಮ್ಯಾನೇಜರ್ ಹನುಮಂತಪ್ಪ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಸ್ಥಳಕ್ಕೆ ದಾವಣಗೆರೆ ಡಿಪೋ ಡಿಸಿ ಬರುವ ತನಕ ಯಾವುದೇ ಬಸ್ ಗಳನ್ನು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.
PublicNext
13/02/2021 01:39 pm