ಹುಬ್ಬಳ್ಳಿ : ಮೂಲತಃ ಬಾಗಲಕೋಟದವರಾದ ಚಂದ್ರಶೇಖರ್ ಗುರೂಜಿ ಪೂರ್ಣ ಹೆಸರು ಚಂದ್ರಶೇಖರ ವಿರೂಪಾಕ್ಷಪ್ಪ ಅಂಗಡಿ. ಬಾಗಲಕೋಟ ಇಂಜನೀಯರಿಂಗ್ ಕಾಲೇಜ್ ದಲ್ಲಿ ಸಿವಿಲ್ ಇಂಜನೀಯರಿಂಗ್ ಪೂರೈಸಿದ್ದ ಇವರು 1988 ರಲ್ಲಿ ಮುಂಬೈಗೆ ತೆರಳಿ ಅಲ್ಲಿ ಕಾಂಟ್ರ್ಯಾಕ್ಟರ್ ಆಗಿ ಕಾರ್ಯ ನಿರ್ವಹಿಸಿದರು.
ನಂತರ ಸಿಂಗಪುರಕ್ಕೆ ತೆರಳಿ ಅಲ್ಲಿ ಆರು ವರ್ಷಗಳ ಕಾಲ ವಾಸ್ತು ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಮರಳಿದ ನಂತರ ಮುಂಬೈಯಲ್ಲಿ ಸರಳ ವಾಸ್ತು ಕಚೇರಿ ಆರಂಭಿಸಿ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಶಾಖೆ ತೆರೆದಿದ್ದರು.
14ನೇ ವಯಸ್ಸಿನಲ್ಲಿ ಜೀವನ ಸಾರ್ಥಕತೆಗಾಗಿ ಭಾರತೀಯ ಸೇನೆ ಸೇರಲು ಯತ್ನಿಸಿದ್ದರು. ಆದರೆ, ಸೇನೆಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ. ಆದರೆ, ಉತ್ತಮ ಶಿಕ್ಷಣ ಪಡೆಯುವ ಗುರಿಯನ್ನು ಮುಂದುವರೆಸಿದರು. 1995ರಲ್ಲಿ ಶರಣ ಸಂಕುಲ ಟ್ರಸ್ಟ್ ಸ್ಥಾಪಿಸಿ ,ಟ್ರಸ್ಟಿಯಾಗಿ ಸಮಾಜಮುಖಿ ಕಾರ್ಯಗಳಿಗೆ ಚಲನೆ ನೀಡಿದರು.
1998ರಲ್ಲಿ ಮೊದಲ ಬಾರಿಗೆ ಮನೆ, ವಾಸ್ತು ಬಗ್ಗೆ ಕನಸು ಕಾಣಲಾರಂಭಿಸಿದರು. ಈ ಜೀವನದಲ್ಲಿ ಜನರ ಸಮಸ್ಯೆ ಬಗೆಹರಿಸಲು ಮನೆ ವಾಸ್ತು ಅಗತ್ಯದ ಬಗ್ಗೆ ಆಲೋಚಿಸಿ ಸರಳ ವಾಸ್ತು ರೂಪಿಸುವ ಬಗ್ಗೆ ಚಿಂತಿಸಿದರು. ಭಾರತದ ಪುರಾತನ ವಾಸ್ತುಶಾಸ್ತ್ರದ ಆಧಾರದ ಮೇಲೆ ಸರಳ ವಾಸ್ತು ರೂಪಿಸಿದರು.
ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಡಾ ಚಂದ್ರಶೇಖರ್ ಗುರೂಜಿ ಸರಳ ವಾಸ್ತು ಎಂಬ ವಾಹಿನಿಯನ್ನೇ ಆರಂಭಿಸಿದ್ದರು. ಇವರ ಸಲಹೆ ಪಡೆದು ವಾಸ್ತು ಬದಲಾಯಿಸಿಕೊಂಡು ಅನೇಕರು ಏಳಿಗೆ ಕಂಡಿದ್ದರು. ಅನೇಕ ಖಾಸಗಿ ವಾಹಿನಿಗಳಲ್ಲಿ ತಮ್ಮ ಸಲಹೆ ಸೂಚನೆ ನೀಡುತ್ತಿದ್ದರು.
ತಮ್ಮ ಕಚೇರಿಗೆ ಬರುವವರಿಂದ ಇಂತಿಷ್ಟು ಮೊತ್ತ ಸಂಭಾವನೆ ಪಡೆದುಕೊಳ್ಳುತ್ತಿದ್ದರು. ವಾಸ್ತು ಪ್ರಕಾರ ಪರಿಹಾರ ಪಡೆದ ಬಳಿಕ ಏಳಿಗೆ ಕಾಣದಿದ್ದಾಗ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದ ಉದಾಹರಣೆಗಳೂ ಉಂಟು.
ಹುಬ್ಬಳ್ಳಿ ಐಟಿ ಪಾರ್ಕ್ ದಲ್ಲಿ ಕಳೆದ 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗುರೂಜಿಯವರ ಕಚೇರಿ 250 ಕ್ಕೂ ಹೆಚ್ಚುಜನ ಉದ್ಯೋಗ ಪಡೆದಿದ್ದರು. ಪ್ರತಿ ತಿಂಗಳೂ ಕಚೇರಿಗೆ ಆಗಮಿಸುತ್ತಿದ್ದ ಗುರೂಜಿ ಮೇಲ್ವಿಚಾರಣೆ ನಡೆಸುತ್ತಿದ್ದರು ಎಂದು ಅಲ್ಲಿಯ ಉದ್ಯೋಗಿಗಳು ತಿಳಿಸಿದ್ದಾರೆ.
PublicNext
05/07/2022 05:43 pm