ಲಂಡನ್: ವಿಶ್ವವಿದ್ಯಾಲಯವೊಂದರ ಕ್ಯಾಂಪಸ್‌ನಲ್ಲಿ ಸುರಿದ 29 ಟನ್ ಕ್ಯಾರೆಟ್ ರಾಶಿಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಹೌದು. ದಕ್ಷಿಣ ಲಂಡನ್‌ನ ಗೋಲ್ಡ್‌ಸ್ಮಿತ್ ವಿಶ್ವವಿದ್ಯಾಲಯದ ಹೊರಗೆ ಭಾರೀ ಪ್ರಮಾಣದ ಕ್ಯಾರೆಟ್ ಅನ್ನು ತಂದು ಸುರಿಯಲಾಗಿದೆ. ಆದರೆ ಯಾಕೆ ಕ್ಯಾರೆಟ್ ಸುರಿದಿದ್ದಾರೆ ಎನ್ನುವುದು ನೆಟ್ಟಿಗರಿಗೆ ಗೊತ್ತಾಗಿರಲಿಲ್ಲ. ಹೀಗಾಗಿ ಕೆಲವರು ಕ್ಯಾರೆಟ್ ತಂದು ಸುರಿಯುವ ಫೋಟೋ, ವಿಡಿಯೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು.
ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಗೋಲ್ಡ್‌ಸ್ಮಿತ್ ವಿಶ್ವವಿದ್ಯಾಲಯ, 'ಕಾಲೇಜಿನ ವಿದ್ಯಾರ್ಥಿಗಳ ಕಲಾ ಪ್ರದರ್ಶನಕ್ಕೆ ಬೇಕಾಗಿ ಇಷ್ಟು ಪ್ರಮಾಣದ ಕ್ಯಾರೆಟ್‌ಗಳನ್ನು ತರಿಸಲಾಗಿದೆ. ಈ ಕಲಾಪ್ರದರ್ಶನ ಕಾಲೇಜಿನ ಎಂಎಫ್‌ಎ ಡಿಗ್ರಿ ಶೋ ಆಗಿದ್ದು, ಈ ಕಲಾಶಿಲ್ಪಕ್ಕೆ 'ಗ್ರೌಂಡಿಂಗ್' ಎಂದು ಹೆಸರಿಡಲಾಗಿದೆ. ಕಲಾವಿದ ಮತ್ತು ಎಂಎಫ್ಎ ವಿದ್ಯಾರ್ಥಿ ರಾಫೆಲ್ ಪೆರೆಜ್ ಇದನ್ನು ನಿರ್ಮಿಸುತ್ತಿದ್ದಾರೆ' ಎಂದು ಸ್ಪಷ್ಟನೆ ನೀಡಿದೆ.
ಜೊತೆಗೆ ಕಲಾವಿದ ರಾಫೆಲ್ ಪೆರೆಜ್ ಕೂಡಾ ಪ್ರತಿಕ್ರಿಯಿಸಿ, `ಜನರು ಬಳಸಲಾರದಂತಹ ಕ್ಯಾರೆಟ್‌ಗಳು ಇದಾಗಿವೆ. ಗ್ರಾಮೀಣ ಮತ್ತು ನಗರದ ನಡುವಣ ಉದ್ವಿಗ್ನತೆಯನ್ನು ಪ್ರತಿನಿಧಿಸುವ ಕಲಾಕೃತಿ ಇದಾಗಿದೆ. ಯುರೋಪಿನ ರೈತರು ತಿರಸ್ಕರಿಸಲ್ಪಟ್ಟ ತಮ್ಮ ಉತ್ಪನ್ನಗಳನ್ನು ಪ್ರತಿಭಟನೆಯ ರೂಪದಲ್ಲಿ ಎಸೆಯುವುದರಿಂದ ಪ್ರೇರಣೆ ಪಡೆದು ಈ ಕಲಾಕೃತಿ ರಚಿಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.
PublicNext
01/10/2020 02:48 pm