ಚಾಮರಾಜನಗರ: ಪೊಲೀಸರು- ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ರಾಷ್ಟ್ರಗೀತೆ ಹಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಚಾಮರಾಜನಗರದಲ್ಲಿ ಇಂದು ಮತಾಂತರ ವಿರೋಧಿ ಹೋರಾಟ ಸಮಿತಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಿಜೆಪಿ ನಗರ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಜಿಲ್ಲಾಡಳಿತ ಭವನದ ಪ್ರವೇಶದ್ವಾರದಲ್ಲಿ ಮೈಕ್ ಮೂಲಕ ಘೋಷಣೆ ಕೂಗುವುದನ್ನು ನಿಲ್ಲಿಸುವಂತೆ ಪೊಲೀಸರು ಪ್ರತಿಭಟನಾಕಾರರನ್ನು ಹಾಗೂ ಮೈಕ್ ಕಟ್ಟಿದ್ದ ವಾಹನವನ್ನು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.ಇದು ಬೇರೆ ಸ್ವರೂಪ ಪಡೆದುಕೊಳ್ಳುತ್ತಿರುವ ಪರಿಸ್ಥಿತಿಯನ್ನು ಅರಿತ ಚಾಮರಾಜನಗರ ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರು ಪ್ರತಿಭಟನಾಕಾರರಿಂದ ಮೈಕ್ ಕಿತ್ತುಕೊಂಡು ರಾಷ್ಟ್ರಗೀತೆ ಆರಂಭಿಸಿದರು.
ರಾಷ್ಟ್ರಗೀತೆ ಆರಂಭವಾಗುತ್ತಿದ್ದಂತೆ ಪ್ರತಿಭಟನಾಕಾರರು ತಮ್ಮ ಕೂಗಾಟವನ್ನು ಬಿಟ್ಟು ಡಿವೈಎಸ್‍ಪಿ ಅವರೊಂದಿಗೆ ರಾಷ್ಟ್ರಗೀತೆ ಹಾಡಿದರು. ಬಳಿಕ ಪ್ರತಿಭಟನಾಕಾರರು ಮತಾಂತರಿಗಳು ಹಾಗೂ ಜಿಲ್ಲಾಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
PublicNext
23/11/2020 05:27 pm