ಹುಬ್ಬಳ್ಳಿ: ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಹುಬ್ಬಳ್ಳಿ ಜನರಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಹೌದು. ಬಹುವರ್ಷಗಳ ಬೇಡಿಕೆಯಾಗಿದ್ದ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ತಡಸ್ ಮಾರ್ಗವಾಗಿ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸುವ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ಸಿಕ್ಕಿದೆ.
ಈ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಿವಮೊಗ್ಗ ಜಿಲ್ಲೆಯ ಸಾಗರದ ತಾಳಗುಪ್ಪದಿಂದ ಶಿರಸಿ ಮೂಲಕ ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಈ ಮಾರ್ಗದಲ್ಲಿ ಸುಧಾರಿತ ತಂತ್ರಜ್ಞಾನ ಆಧಾರಿತ ಡ್ರೋನ್ ಸರ್ವೇ ಕಾರ್ಯ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಶೀಘ್ರದಲ್ಲಿಯೇ ಸಮೀಕ್ಷೆ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ಪ್ರಸ್ತಾವನೆ ಅನ್ವಯ ಈ ಮಾರ್ಗದ ಪಿ.ಇ.ಟಿ ಸರ್ವೇ ಕಾರ್ಯಕ್ಕೆ ಆದೇಶ ನೀಡಿ ಅನುದಾನ ಬಿಡುಗಡೆಯಾಗಿದೆ. ಈ ಹಿಂದೆ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಇದೇ ಮಾರ್ಗದ ಸಮೀಕ್ಷೆಗಾಗಿ ಅನುದಾನ ತಂದಿದ್ದರು. ಆದರೆ ಬಳಿಕ ತೋರಿದ ನಿರಾಸಕ್ತಿಯಿಂದಾಗಿ ಅನುದಾನ ವಾಪಸ್ ಹೋಗಿತ್ತು. ಈಗ ತಾಳಗುಪ್ಪ-ಸಿದ್ದಾಪುರ-ಶಿರಸಿ-ಮುಂಡಗೋಡ-ಹುಬ್ಬಳ್ಳಿ ಮಾರ್ಗದ ಸಮೀಕ್ಷೆ ನಡೆಸಲು 79 ಲಕ್ಷ ರೂ. ಅನುದಾನ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಮೀಕ್ಷೆ ಆರಂಭವಾಗಲಿದೆ ಎಂದು ಮೂಲಗಳಿಂದ ಮಾಹಿತಿನ ಲಭಿಸಿದೆ.
PublicNext
08/10/2020 03:50 pm