ಕನಕಪುರ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಹಾರೋಹಳ್ಳಿಗೆ ಜಲ ಗಂಡಾಂತರವಾಗಿದ್ದು, ಅರ್ಧ ಪಟ್ಟಣವೇ ಜಲಾವೃತವಾಗಿ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ!
ಕನಕಪುರ ತಾಲೂಕಿನ ಹಾರೋಹಳ್ಳಿಯ ದೊಡ್ಡಕೆರೆ ತುಂಬಿದ ಪರಿಣಾಮ ಅರ್ಧ ಪಟ್ಟಣ ಜಲಮಯವಾಗಿದ್ದು, ನೂರಾರು ಮನೆಗಳಿಗೆ ಹಾನಿಯಾಗಿದೆ. ಕೆರೆ ತುಂಬಿದ ಪರಿಣಾಮ ಪಟ್ಟಣ ನಿವಾಸಿಗಳು ರಾತ್ರಿ ಪೂರ್ತಿ ಪರದಾಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ರಾತ್ರಿಯೇ ಕಾರ್ಯಾಚರಣೆ ನಡೆಸಿ ಕೋಡಿ ಒಡೆದು ಹೆಚ್ಚುವರಿ ನೀರನ್ನು ಹೊರಬಿಟ್ಟ ಪರಿಣಾಮ ಅನಾಹುತ ತಗ್ಗಿವೆ.
ಕೈಗಾರಿಕಾ ಪ್ರದೇಶದಲ್ಲಿ ಕ್ಯಾಂಡಲ್ ತಯಾರಿಸುವ ಕಾರ್ಖಾನೆ ಸಂಪೂರ್ಣ ಜಲಾವೃತವಾಗಿದೆ. ಹಾರೋಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ, ತರಕಾರಿ ಮಾರುಕಟ್ಟೆ, ಬ್ರಾಹ್ಮಣರ ಬೀದಿ, ಅಡೆ ಬೀದಿ, ಸೇರಿದಂತೆ ಮೂರು ಬಡಾವಣೆಗಳು ಮುಳುಗಿವೆ. 10ಕ್ಕೂ ಹೆಚ್ಚು ಮನೆಗಳು ಧರೆಗುರುಳಿವೆ. ಆನೇಕಲ್ ರಸ್ತೆಯ ಅಂಗಡಿಗಳಿಗೆ ನೀರು ನುಗ್ಗಿದ್ದು, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅನಾಹುತವಾಗಿದೆ!
ಪ್ರಭಾವಿಗಳ ಕೆರೆ ಜಾಗ ಒತ್ತುವರಿಯಿಂದ ಅನಾಹುತ ಸಂಭವಿಸಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ವಿಶ್ವನಾಥ್ ಭೇಟಿ ನೀಡಿ, ಪರಿಹಾರ ವಿತರಿಸುವ ಭರವಸೆ ನೀಡಿದ್ದಾರೆ.
PublicNext
31/08/2022 10:57 am