ಗದಗ : ಬಾಂಧವ್ಯ ಪ್ರೀತಿ ಮಮಕಾರಗಳ ಬಂಧ ಕೇವಲ ಮನುಷ್ಯ ಜಾತಿಗಷ್ಟೇ ಸೀಮಿತವಲ್ಲ. ನಮಗಿಂತ ಹೆಚ್ಚಾಗಿ ಇತರ ಮೂಕ ಪ್ರಾಣಿಗಳು ಇಂಥ ಭಾವನೆಗಳನ್ನು ಹೊಂದಿವೆ.
ಮೂರ್ನಾಲ್ಕು ದಿನಗಳಿಂದ ಮಂಗವೊಂದು ಕಣ್ಣೇ ತೆರೆದಿರದ ಪುಟ್ಟ ನಾಯಿ ಮರಿಯೊಂದನ್ನು ತನ್ನದೇ ಸಂತಾನವೇನೋ ಎಂಬಂತೆ ಹೊತ್ತು ಓಡಾಡುತ್ತಿದೆ.
ಗದಗ ಜಿಲ್ಲೆಯ ವಿವೇಕಾನಂದ ನಗರದ ನಾಲ್ಕನೇ ಕ್ರಾಸ್ ನ ಸುತ್ತಮುತ್ತ ಹೀಗೆ ನಾಯಿಮರಿಯನ್ನು ಹೊತ್ತು ಓಡಾಡುತ್ತಿರುವ ಮಂಗ ಏನೇ ಪ್ರಯತ್ನಪಟ್ಟರೂ ನಾಯಿಮರಿಯನ್ನು ಬಿಡುತ್ತಿಲ್ಲ.
ಸುತ್ತಲಿನ ಹಲವರು ವಿಷಯವೇನೆಂದು ಅರ್ಥವಾಗದೆ, ಮಂಗ ಆ ಪುಟ್ಟ ನಾಯಿಗೇನಾದರೂ ತೊಂದರೆ ಮಾಡೀತು ಎಂಬ ಕಳಕಳಿಯಿಂದ ಬಿಡಿಸಲು ಪ್ರಯತ್ನಿಸಿದ್ದಾರೆ.
ಬಾಳೇಹಣ್ಣು,ತೆಂಗಿನಕಾಯಿ ಚಿಪ್ಪು ಏನೇ ನೀಡಿದರು ಕೈಚಾಚಿ ಪಡೆಯುತ್ತಿದೆಯೇ ಹೊರತು ನಾಯಿಮರಿಯನ್ನು ಕೈ ಬಿಡುತ್ತಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಟೆರೇಸ್ ನಿಂದ ಟೆರೇಸಿಗೆ ಓಡಾಡುತ್ತಿರುವ ಈ ಕೋತಿ ಇದೇ ಪ್ರದೇಶದಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ನಾಯಿಮರಿ ಹಸಿವೆಯಿಂದಲೋ,ತಾಯಿ ಮಡಿಲಿಂದ ತಪ್ಪಿಸಿಕೊಂಡಿದ್ದಕ್ಕೂ ದಿನವಿಡೀ ಕಿರುಚುತ್ತಲೇ ಇದೆ. ಆದರೆ ಯಾರೂ ಬೆದರಿಸಿ ಹೊಡೆಯುವ ಪ್ರಯತ್ನ ಮಾಡಿಲ್ಲ. ಮಂಗವೂ ಆ ನಾಯಿಮರಿಗೆ ಯಾವುದೇ ತೊಂದರೆ ನೀಡಿಲ್ಲ.
ಮಹಡಿಯ ಮೇಲೆ ಧಾನ್ಯ ಅಥವಾ ಬೇರೆ ಆಹಾರ ಪದಾರ್ಥಗಳನ್ನು ತಿಂದು ಹೋಗುತ್ತಿರುವ ಈ ಕೋತಿ ಮಲಗುವಾಗಲೂ ನಾಯಿ ಮರಿಯನ್ನು ಪಕ್ಕದಲ್ಲೇ ಮಲಗಿಸಿಕೊಳ್ಳುತ್ತಿದೆ.
ಒಟ್ಟಿನಲ್ಲಿ ಈ ಕೆಂಪುಮೂತಿಯ ಕೋತಿ ಹಾಗೂ ಕಣ್ಣು ತೆರೆಯದ ಪುಟ್ಟ ನಾಯಿಮರಿಯ ಗೋಳು ಕಂಡು ಮರುಗದವರಿಲ್ಲ.
PublicNext
24/08/2022 08:41 am